ದೆಹಲಿ ಪ್ರತಿಭಟನೆಗೆ ರಾಜಕೀಯ ಉದ್ದೇಶಗಳ ಅನುಮಾನ: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ
Wednesday, July 22, 2026
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ರಾಜಕೀಯ ಉದ್ದೇಶಗಳಿರುವ ಸಾಧ್ಯತೆ ಇದೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಪ್ರತಿಭಟನೆಯ ಹಿಂದಿನ ಉದ್ದೇಶ ಹಾಗೂ ಅದರ ಸಮಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಮೂಡಿವೆ ಎಂದರು. ರಾಜಕೀಯ ಲಾಭಕ್ಕಾಗಿ ಕೆಲವು ಬೆಳವಣಿಗೆಗಳನ್ನು ಬಳಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯೊಬ್ಬರು ಯುವಪೀಳಿಗೆ ಹಾಗೂ Gen Z ಅನ್ನು "ಕಾಕ್ರೋಚ್" ಎಂದು ಉಲ್ಲೇಖಿಸಿರುವುದು ಯುವಜನಾಂಗಕ್ಕೆ ಮಾಡಿದ ಅವಮಾನ ಎಂದು ಅನುಪಮಾ ಶೆಣೈ ಟೀಕಿಸಿದರು. ಇಂತಹ ಹೇಳಿಕೆ ನೀಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಪ್ರಶ್ನಿಸಿದ ಅವರು, ಇದೇ ಹೇಳಿಕೆಯೇ "ಕಾಕ್ರೋಚ್" ಹೆಸರಿನ ಪ್ರತಿಭಟನೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಸಂಬಂಧಿತ ನ್ಯಾಯಮೂರ್ತಿಯ ವಿರುದ್ಧ ಲೋಕಸಭೆಯಲ್ಲಿ ಮಹಾಭಿಯೋಗ (ಇಂಪೀಚ್‌ಮೆಂಟ್) ಪ್ರಸ್ತಾವ ಮಂಡಿಸುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರನ್ನು ಒತ್ತಾಯಿಸಿದರು.
NEET ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆಗಳ ವಿಚಾರ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಹಿಂದೆ ನಡೆದ ಕೆಮಿಸ್ಟ್ರಿ, PSI ಹಾಗೂ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯ ಸಂದರ್ಭಗಳಲ್ಲಿ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿದ್ದರೇ ಎಂದು ಪ್ರಶ್ನಿಸಿದರು. ಇದೇ ರೀತಿ, ಪ್ರತಿವರ್ಷ SSLC ಹಾಗೂ PUC ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಪ್ರಕರಣಗಳ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಎಷ್ಟು ಬಾರಿ ರಾಜೀನಾಮೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.
SSLC ಮತ್ತು PUC ಪರೀಕ್ಷೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಅನಿವಾರ್ಯವಾಗಿದ್ದರೆ, NEET ಪರೀಕ್ಷೆಗೆ ಪರ್ಯಾಯವಾಗಿ ಹಲವು ಕೋರ್ಸ್‌ಗಳು ಹಾಗೂ ವೃತ್ತಿಮಾರ್ಗಗಳು ಲಭ್ಯವಿವೆ ಎಂದು ಅವರು ಹೇಳಿದರು. ಪೋಷಕರು ತಮ್ಮ ಮಕ್ಕಳ ಮೇಲೆ ವೈದ್ಯರಾಗಲೇಬೇಕು ಎಂಬ ಒತ್ತಡ ಹೇರಬಾರದು. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾದ ಶಿಕ್ಷಣ ಹಾಗೂ ವೃತ್ತಿ ಆಯ್ಕೆಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.