-->
 ಜು. 25: ‘ಗುಜ್ಜಾಡಿ ನರಸಿಂಹ ನಾಯಕ್ ಅವರ ನೆನಪುಗಳು’ ಕೃತಿ ಬಿಡುಗಡೆ

ಜು. 25: ‘ಗುಜ್ಜಾಡಿ ನರಸಿಂಹ ನಾಯಕ್ ಅವರ ನೆನಪುಗಳು’ ಕೃತಿ ಬಿಡುಗಡೆ


ಗುಜ್ಜಾಡಿ ಸ್ವರ್ಣ ಜುವೆಲರ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರಾದ ದಿವಂಗತ ಗುಜ್ಜಾಡಿ ನರಸಿಂಹ ನಾಯಕ್ ಅವರ ಜನ್ಮಶತಮಾನೋತ್ಸವ ವರ್ಷದ ಅಂಗವಾಗಿ ‘ಗುಜ್ಜಾಡಿ ನರಸಿಂಹ ನಾಯಕ್ ಅವರ ನೆನಪುಗಳು’ ಕೃತಿಯ ಬಿಡುಗಡೆ ಸಮಾರಂಭವು ಜುಲೈ 25ರಂದು ಬೆಳಿಗ್ಗೆ 10.30ಕ್ಕೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ನಡೆಯಲಿದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ್ ನಾಯಕ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಲೆಕ್ಕಪರಿಶೋಧಕ ಕೆ. ಉಲ್ಲಾಸ್ ಕಾಮತ್, ವಿಶ್ವ ಹಿಂದೂ ಪರಿಷತ್‌ನ ಎಂ.ಎನ್. ನಾಗರಾಜ್ ಹಾಗೂ ಎಒಜೆ ಮುಖ್ಯ ಸಂಪಾದಕ ಸುಮೇಶ್ ವಾಧೇರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಉದಯವಾಣಿಯ ಮಾಜಿ ಉಪಸಂಪಾದಕ ಸತೀಶ್ ಮಲ್ಯ ಅವರು ದಿವಂಗತ ನರಸಿಂಹ ನಾಯಕ್ ಅವರೊಂದಿಗೆ ನಡೆಸಿದ ವಿಸ್ತೃತ ಸಂದರ್ಶನಗಳ ಆಧಾರದ ಮೇಲೆ ಈ ಕೃತಿಯನ್ನು ಆತ್ಮಕಥನ ರೂಪದಲ್ಲಿ ಸಂಪಾದಿಸಲಾಗಿದೆ. ಪುಸ್ತಕದಲ್ಲಿ ಅವರ ವೈಯಕ್ತಿಕ ಮತ್ತು ಕೌಟುಂಬಿಕ ಜೀವನ, ವ್ಯಾಪಾರ ಕ್ಷೇತ್ರದಲ್ಲಿನ ಸಾಧನೆ ಹಾಗೂ ಸಾಮಾಜಿಕ ಬದುಕನ್ನು ಮೂರು ಪ್ರತ್ಯೇಕ ವಿಭಾಗಗಳಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು.

ತೀವ್ರ ಬಡತನದಿಂದ ಆರಂಭಿಸಿ ಪ್ರಾಮಾಣಿಕತೆ, ಪರಿಶ್ರಮ ಹಾಗೂ ಜನರ ವಿಶ್ವಾಸದ ಬಲದಿಂದ ಯಶಸ್ವಿ ಉದ್ಯಮಿಯಾಗಿ ಬೆಳೆದ ನರಸಿಂಹ ನಾಯಕ್ ಅವರ ಜೀವನ ಪಯಣವನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ಸಮಾಜಸೇವೆ, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ಜನಸಂಘ–ಬಿಜೆಪಿಯೊಂದಿಗೆ ಹೊಂದಿದ್ದ ನಂಟು, ರಾಜಕೀಯ ವಿಚಾರಧಾರೆ, ಜೀವನ ಮೌಲ್ಯಗಳು ಹಾಗೂ ಕುಟುಂಬದ ಒಗ್ಗಟ್ಟಿಗೆ ನೀಡಿದ ಮಹತ್ವ ಸೇರಿದಂತೆ ಹಲವು ವಿಷಯಗಳನ್ನು ಕೃತಿಯಲ್ಲಿ ಒಳಗೊಂಡಿದೆ ಎಂದು ಪ್ರಭಾಕರ್ ನಾಯಕ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವರ್ಣ ಜುವೆಲರ್ಸ್‌ನ ರಮಾದಾಸ್ ನಾಯಕ್, ರಘುವೀರ್ ನಾಯಕ್, ದೀಪಕ್ ಹಾಗೂ ಅಭಯ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article