ಸೋನಂ ವಾಂಗ್ಚುಕ್ ಹೋರಾಟಕ್ಕೆ ಬೆಂಬಲ: ನಿವೃತ್ತ ಪತ್ರಕರ್ತ ನಂದಗೋಪಾಲ್‌ರಿಂದ 48 ಗಂಟೆಗಳ ಉಪವಾಸ ಸತ್ಯಾಗ್ರಹ
ಲಡಾಖ್‌ನ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ನವದೆಹಲಿಯಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗೆ ಬೆಂಬಲ ಸೂಚಿಸಿ, ನಿವೃತ್ತ ಪತ್ರಕರ್ತ ಮತ್ತು ಶೈಕ್ಷಣಿಕ ಕಾರ್ಯಕರ್ತ ಶ್ರೀನಿವಾಸನ್ ನಂದಗೋಪಾಲ್ ಅವರು 48 ಗಂಟೆಗಳ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಭಾನುವಾರ ಬೆಳಗ್ಗೆ ಆರಂಭವಾದ ಈ ಉಪವಾಸವು ಮಂಗಳವಾರ ಬೆಳಗ್ಗಿನವರೆಗೆ ಮುಂದುವರಿಯಲಿದೆ. ಸೋನಂ ವಾಂಗ್ಚುಕ್ ಹಾಗೂ ಇತರ ಪ್ರತಿಭಟನಾಕಾರರು ನಡೆಸುತ್ತಿರುವ ಅನಿರ್ದಿಷ್ಟಾವಧಿಯ ಉಪವಾಸದ ನೋವು ಮತ್ತು ಸಂಕಲ್ಪವನ್ನು ಹಂಚಿಕೊಳ್ಳುವ ಉದ್ದೇಶದಿಂದ ತಾವು ಈ ಸತ್ಯಾಗ್ರಹ ಕೈಗೊಂಡಿರುವುದಾಗಿ ನಂದಗೋಪಾಲ್ ತಿಳಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿತನವನ್ನು ಒತ್ತಾಯಿಸಿ ದೇಶಾದ್ಯಂತ ಕೇಳಿಬರುತ್ತಿರುವ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸನ್ ನಂದಗೋಪಾಲ್ ಅವರು ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆಯ ಸಹ-ಸಂಸ್ಥಾಪಕರಾಗಿದ್ದು, ಮಕ್ಕಳು ಮತ್ತು ಯುವಕರಿಗೆ ಪರ್ಯಾಯ ಶಿಕ್ಷಣ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ಅವರು ‘ಡ್ರೀಮ್ಸ್ ಆನ್ ವೀಲ್ಸ್’ ಬೈಕ್ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಸುಮಾರು 6,500 ಕಿಲೋಮೀಟರ್ ಸಂಚರಿಸಿ 5,000ಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಸಿದ್ಧತೆ ಮತ್ತು ವೃತ್ತಿ ಮಾರ್ಗದರ್ಶನ ಕುರಿತು ಸಂವಾದ ನಡೆಸಿದ್ದರು.
"ಶಿಕ್ಷಣಕ್ಕೆ ಪರ್ಯಾಯ ವಿಧಾನಗಳ ಕ್ಷೇತ್ರದಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವುದರಿಂದ, ಶಿಕ್ಷಣ ವ್ಯವಸ್ಥೆಯ ಇಂದಿನ ಸ್ಥಿತಿ ಹಾಗೂ ಪರೀಕ್ಷಾ ಅಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ನಿರಾಶಾದಾಯಕವಾಗಿದೆ. ಈಗ ಯಾರಾದರೂ ಬೆಕ್ಕಿಗೆ ಗಂಟೆ ಕಟ್ಟುವ ಸಮಯ ಬಂದಿದೆ," ಎಂದು ನಂದಗೋಪಾಲ್ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
