ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಚಾರ್ಜ್: ಕಾಂಗ್ರೆಸ್ ನಾಯಕರಿಂದ ಪ್ರಧಾನಿ ನಿವಾಸದ ಮುಂದೆ ಪ್ರತಿಭಟನೆ, ರಾಜೀನಾಮೆಗೆ ಆಗ್ರಹ
ನೀಟ್ ಪರೀಕ್ಷೆಯ ಪೇಪರ್ ಸೋರಿಕೆ ವಿಚಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ಖಂಡಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಲೋಕಸಭಾ ಸದಸ್ಯರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಲೋಕ ಕಲ್ಯಾಣ ಮಾರ್ಗ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದರು. ಪ್ರಧಾನಿಯವರ ರಾಜೀನಾಮೆಗೆ ಅವರು ಆಗ್ರಹಿಸಿದರು.
ಈ ಧರಣಿಯಲ್ಲಿ ನಾಯಕರು ಭಾಗವಹಿಸಿ ಪ್ರಧಾನಿಯವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸೋಮವಾರ ಸಿಜೆಪಿ ನೇತೃತ್ವದಲ್ಲಿ ನಡೆದ ಸಂಸತ್ ಚಲೋ ಪ್ರತಿಭಟನಾ ಮೆರವಣಿಗೆಯ ವೇಳೆ ಯುವಕರು ಹಾಗೂ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಮೊದಲು ಪ್ರಧಾನಿ ನಿವಾಸದತ್ತ ಮೆರವಣಿಗೆ ನಡೆಸಿದ್ದರು.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, "ನಿನ್ನೆ ಯುವ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯಕ್ಕೆ ಉತ್ತರ ಕೇಳಲು ನಾವು ಪ್ರಧಾನಿ ಮೋದಿ ಅವರ ಮನೆಗೆ ಮೆರವಣಿಗೆ ನಡೆಸಿದ್ದೇವೆ. ಸರ್ಕಾರವು ಯಾವುದೇ ಹೊಣೆಯನ್ನು ಹೊರಲು ಬಯಸುವುದಿಲ್ಲ, ಅಥವಾ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆಯನ್ನೂ ಬಯಸುತ್ತಿಲ್ಲ" ಎಂದು ಹೇಳಿದರು.
"ದೇಶದ ಯುವಕರ ಭವಿಷ್ಯವನ್ನು ಹಾಳು ಮಾಡಿದ ಕಾರಣಕ್ಕೆ ಪ್ರಧಾನಿ ಮತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು" ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಆಗ್ರಹಿಸಿದರು.
ರಾಹುಲ್ ಗಾಂಧಿ, ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರ ಕಾಂಗ್ರೆಸ್ ನಾಯಕರು ಸೋಮವಾರದ ಪೊಲೀಸ್ ದೌರ್ಜನ್ಯದಲ್ಲಿ ಗಾಯಗೊಂಡ ಕೆಲವು ವಿದ್ಯಾರ್ಥಿಗಳನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.