ಒತ್ತಿನೆಣ್ಣೆ ಗುಡ್ಡ ಕುಸಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಭೇಟಿ
Wednesday, July 08, 2026
ಬೈಂದೂರು ತಾಲೂಕಿನ ಒತ್ತಿನೆಣ್ಣೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗುಡ್ಡ ಕುಸಿತಗೊಂಡ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಗುಡ್ಡ ಕುಸಿತದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಅಧಿಕಾರಿಗಳೊಂದಿಗೆ ಅವಲೋಕಿಸಿದ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಭಿಯಂತರರಿಂದ ಘಟನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಕುಸಿತದ ಪ್ರಮಾಣ, ರಾಷ್ಟ್ರೀಯ ಹೆದ್ದಾರಿಗೆ ಎದುರಾಗಿರುವ ಅಪಾಯ ಹಾಗೂ ಈಗಾಗಲೇ ಕೈಗೊಂಡಿರುವ ತಾತ್ಕಾಲಿಕ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪರಿಶೀಲನೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಸ್ಥಳದಲ್ಲಿ ಶಾಶ್ವತ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳುವುದು ಅಗತ್ಯವಾಗಿದ್ದು, ಈ ಸಂಬಂಧ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರ ಹಾಗೂ ವಾಹನ ಸಂಚಾರದ ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಗುಡ್ಡ ಕುಸಿತ ಸಂಭವಿಸಬಹುದಾದ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲಾಡಳಿತವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಲಾಗಿದೆ.
.jpeg)