ಹೈಡ್ರೋಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ
ಸಾರ್ವಜನಿಕರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನದಲ್ಲಿ ಹಾಗೂ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ನೇತೃತ್ವದಲ್ಲಿ, ಉಡುಪಿ ಸಂಚಾರ ಠಾಣೆಯ ಪಿಎಸ್‌ಐ ಮಹೇಶ್ ಟಿ.ಎಂ. ನೇತೃತ್ವದ ವಿಶೇಷ ತಂಡವು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಬುಡ್ನಾರ್‌ನಲ್ಲಿ ಕಾರ್ಯಾಚರಣೆ ನಡೆಸಿತು.
ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಹೊಂದಿದ್ದು, ಕಾಪು, ಉಡುಪಿ, ಮಣಿಪಾಲ ಹಾಗೂ ಕಾರ್ಕಳ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ಉದ್ಯಾವರ ಪಿತ್ರೋಡಿಯ ವಿಜಯ ಪೂಜಾರಿ (36), ಕುಕ್ಕಂದೂರಿನ ಹಾರ್ಜಿಡ್ಡುವಿನ ಪಿ.ಎ. ಮೊಹಮ್ಮದ್ ಸಮ್ಮಾಸ್ (24) ಹಾಗೂ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ಕುಂಟಿಬೈಲಿನ ಆಕಾಶ್ ಶೆಟ್ಟಿ (20) ಅವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 4 ಗ್ರಾಂ ಎಂಡಿಎಂಎ ಪೌಡರ್, 2.5 ಗ್ರಾಂ ಹೈಡ್ರೋಗಾಂಜಾ, 3.65 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್, 3 ಗ್ರಾಂ ಗಾಂಜಾ, ಮಾದಕ ವಸ್ತು ಸಾಗಾಟಕ್ಕೆ ಬಳಸಿದ್ದ ಒಂದು ಕಾರು ಸೇರಿದಂತೆ ಒಟ್ಟು ₹3,31,500 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95/2026 ದಾಖಲಿಸಿಕೊಂಡು, ಎನ್‌ಡಿಪಿಎಸ್ ಕಾಯ್ದೆ–1985ರ ಕಲಂ 8(ಸಿ), 20(ಸಿ) ಹಾಗೂ 22(ಎ)ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪ್ರವೀಣ್ ಕುಮಾರ್, ಹಿರಿಯಡ್ಕ ಠಾಣೆಯ ಪ್ರವೀಣ್ ಶೆಟ್ಟಿಗಾರ್, ಮಲ್ಪೆ ವೃತ್ತ ಕಚೇರಿಯ ಇಂದ್ರೇಶ್, ಹನುಮಂತ ಅಸ್ಕಿ, ಮನು ಕುಮಾರ್, ರಶ್ಮೀ ಹೆಗಡೆ, ರವಿ ಕುಮಾರ್ ಹಾಗೂ ಉಡುಪಿ ಸಂಚಾರ ಠಾಣೆಯ ಶ್ರೀನಿವಾಸ, ಸಂತೋಷ ಮತ್ತು ದಿನೇಶ್ ಅವರನ್ನೊಳಗೊಂಡ ವಿಶೇಷ ಪೊಲೀಸ್ ತಂಡ ಭಾಗವಹಿಸಿತ್ತು.