ದೇವಸ್ಥಾನದ ಚೆಕ್‌ಗೆ ನಕಲಿ ಸಹಿ ಮಾಡಿ ಹಣ ಪಡೆಯಲು ಯತ್ನ: ಆರೋಪಿಯ ಬಂಧನ
ಕಾರ್ಕಳದ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಚೆಕ್‌ಗೆ ನಕಲಿ ಸಹಿ ಮಾಡಿ ಹಣ ಪಡೆಯಲು ಯತ್ನಿಸಿದ ಆರೋಪದಡಿ ದೇವಸ್ಥಾನದ ಡಾಟಾ ಎಂಟ್ರಿ ಆಪರೇಟರ್ ನನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಎಣ್ಣೆಹೊಳೆ ನಿವಾಸಿ ಅಕ್ಷಯ ದೇವಾಡಿಗ (29) ಎಂದು ಗುರುತಿಸಲಾಗಿದೆ.
ಆರೋಪಿಯು 2022ರ ಡಿಸೇಂಬರ್ 1ರಿಂದ 2026ರ ಮೇ 7ರವರೆಗೆ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಲಾಖೆಯ ಲೆಕ್ಕ ಪರಿಶೋಧನೆ ವೇಳೆ ಕರ್ತವ್ಯ ಲೋಪ ಹಾಗೂ ಆರ್ಥಿಕ ಅಕ್ರಮ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಆರೋಪಿಯಿಂದ ವಿವರಣೆ ಕೇಳಲಾಗಿತ್ತು. ಆದರೆ ಅವರು ಯಾವುದೇ ಸಮರ್ಪಕ ಉತ್ತರ ನೀಡದೆ 2026ರ ಮೇ 7ರಂದು ರಾಜೀನಾಮೆ ಸಲ್ಲಿಸಿ ಬಳಿಕ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ದೇವಸ್ಥಾನದ ಸಮಿತಿಯ ಅಧ್ಯಕ್ಷರ ಗಮನಕ್ಕೆ ತಾರದೆ ಖಾಲಿ ಚೆಕ್‌ಗಳಿಗೆ ನಕಲಿ ಸಹಿ ಮಾಡಿ ಹಣ ಪಡೆಯಲು ಯತ್ನಿಸಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ.