-->
ಶ್ರೀಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಕುರಿತ ಹೇಳಿಕೆ ವಿವಾದ: ಕ್ಷಮೆಯಾಚನೆ, ಮಠದಿಂದ ವಿಷಾದ

ಶ್ರೀಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಕುರಿತ ಹೇಳಿಕೆ ವಿವಾದ: ಕ್ಷಮೆಯಾಚನೆ, ಮಠದಿಂದ ವಿಷಾದ


ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥೆ ಕಾರ್ಯಕ್ರಮದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರ ಕುರಿತು ನೀಡಲಾದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಹರಿಕಥೆ ಕಲಾವಿದೆ  ಸಾರ್ವಜನಿಕ ಕ್ಷಮೆಯಾಚನೆ ಮಾಡಿದ್ದಾರೆ. ಇದೇ ವೇಳೆ ಪರ್ಯಾಯ ಶಿರೂರು ಮಠವೂ ಅಧಿಕೃತ ಪ್ರಕಟಣೆ ಮೂಲಕ ಘಟನೆಗೆ ವಿಷಾದ ವ್ಯಕ್ತಪಡಿಸಿ ಸ್ಪಷ್ಟನೆ ನೀಡಿದೆ.


ಶಿರೂರು ಮಠದ ದಿವಾನರಾದ ಡಾ. ಉದಯಕುಮಾರ ಸರಳತ್ತಾಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಮಠದ ಸುಪರ್ದಿಯಲ್ಲಿರುವ ರಾಜಾಂಗಣದಲ್ಲಿ ಭರತನಾಟ್ಯ ಕಾರ್ಯಕ್ರಮಕ್ಕಾಗಿ ಅಂಕಿತಾ ನಾಯಕ್ ಹಾಗೂ ಗೌರಿ ಪಾಂಡುರಂಗಿ ಅವರಿಗೆ ಅನುಮತಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಕಾರ್ಯಕ್ರಮದ ಮಧ್ಯೆ 'ಭಕ್ತ ಪ್ರಹ್ಲಾದ' ಹರಿಕಥೆಯನ್ನು ಕೂಡ ನಡೆಸಲಾಗಿದ್ದು, ಆ ವೇಳೆ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಕುರಿತು ಅಕ್ಷೇಪಾರ್ಹ ಹೇಳಿಕೆ ನೀಡಿರುವುದು ಮಠದ ಗಮನಕ್ಕೆ ಬಂದಿದೆ ಎಂದು ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಬ್ಬರಿಗೂ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಲಾಗಿತ್ತು. ಅದರಂತೆ ಅವರು ವಿಡಿಯೋ ಮೂಲಕ ಸಾರ್ವಜನಿಕ ಕ್ಷಮೆಯಾಚನೆ ಮಾಡಿದ್ದು, ನಡೆದ ಅನಪೇಕ್ಷಿತ ಘಟನೆಯ ಬಗ್ಗೆ ಪರ್ಯಾಯ ಶಿರೂರು ಮಠ ವಿಷಾದ ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿವಾದಿತ ಹರಿಕಥೆಯಲ್ಲಿ ಆಚಾರ್ಯ ಮಾಧ್ವರ ಜೀವನ ಪ್ರಸಂಗವನ್ನು ನಿರೂಪಿಸುವ ಸಂದರ್ಭದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರನ್ನು ಏಕವಚನದಲ್ಲಿ ಉಲ್ಲೇಖಿಸಿ, ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಕಟ್ಟುಕಥೆ ಹೇಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಶಂಕರಾಚಾರ್ಯರ ಅನುಯಾಯಿಗಳು ಹಾಗೂ ವಿವಿಧ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವಿವಾದದ ಬೆನ್ನಲ್ಲೇ ಕಲಾವಿದೆಯ ಕ್ಷಮೆಯಾಚನೆ ಮತ್ತು ಶಿರೂರು ಮಠದ ಅಧಿಕೃತ ಸ್ಪಷ್ಟನೆಯೊಂದಿಗೆ ವಿವಾದಕ್ಕೆ ತೆರೆ ಎಳೆಯಲಾಗಿದೆ. 



Ads on article

Advertise in articles 1

advertising articles 2

Advertise under the article