ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸಂಸ್ಕೃತ ಪ್ರತಿಭಾ ಪುರಸ್ಕಾರ
Sunday, July 26, 2026
ಪರ್ಯಾಯ ಶೀರೂರು ಮಠದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ (ರಿ) ಹಾಗೂ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ "ಸಂಸ್ಕೃತ ಪ್ರತಿಭಾ ಪುರಸ್ಕಾರ" ಸಮಾರಂಭವು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು.
ಸಮಾರಂಭವನ್ನು ಪರ್ಯಾಯ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉದ್ಘಾಟಿಸಿ, ಪುರಸ್ಕಾರ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಿದರು. ಸಂಸ್ಕೃತ ಭಾಷೆಯು ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಜ್ಞಾನಪರಂಪರೆಯ ಮೂಲಾಧಾರವಾಗಿದ್ದು, ಅದರ ಸಂರಕ್ಷಣೆ ಮತ್ತು ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಡಾ. ರಮೇಶ್ ಟಿ.ಎಸ್. ಅವರು ವಿಶೇಷ ಉಪನ್ಯಾಸ ನೀಡಿ, ಸಂಸ್ಕೃತ ಭಾಷೆಯ ಮಹತ್ವ, ಅದರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಕುರಿತು ಪ್ರಬೋಧನಾತ್ಮಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ ಸಂಸ್ಕೃತ ಪ್ರತಿಭಾವಂತರನ್ನು ಸನ್ಮಾನಿಸಿ "ಸಂಸ್ಕೃತ ಪ್ರತಿಭಾ ಪುರಸ್ಕಾರ" ಪ್ರದಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ, ಉಡುಪಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಲೋಕೇಶ್ ಸಿ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಲ್ಲಮ್ಮ, ಕಾರ್ಕಳದ ಲೆಕ್ಕಪರಿಶೋಧಕರಾದ ಕೆ. ಕಮಲಾಕ್ಷ ಕಾಮತ್ ಹಾಗೂ ಗುರುವಾಯೂರು ಸಂಸ್ಕೃತ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಪ್ರೊ. ಹರಿಪ್ರಸಾದ್ ಕೆ. ಉಪಸ್ಥಿತರಿದ್ದರು.
ವಿದ್ವಾನ್ ಪ್ರಭಾಕರ ಭಟ್ ಸ್ವಾಗತಿಸಿದರು. ವಿದ್ವಾನ್ ಅಶೋಕ ಹೆಗಡೆ ವಂದಿಸಿದರು.ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಕಾರ್ಯಕ್ರಮ ನಿರೂಪಣೆ ಮಾಡಿದರು.
