ಕಾಂಗ್ರೆಸ್ ಮುಖಂಡ ನಿರಂಜನ ರೈ ಮಠಂತಬೆಟ್ಟು ಹೃದಯಾಘಾತದಿಂದ ನಿಧನ
Wednesday, July 08, 2026
ಕಾಂಗ್ರೆಸ್ ಮುಖಂಡ ಹಾಗೂ ಕಂಬಳ ಕ್ಷೇತ್ರದ ಸಕ್ರಿಯ ಸಂಘಟಕರಾಗಿದ್ದ ನಿರಂಜನ ರೈ ಮಠಂತಬೆಟ್ಟು ಅವರು ಇಂದು ಪುತ್ತೂರು ತಾಲೂಕು ಕಚೇರಿಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾದರು.
ಕೆಲಸದ ನಿಮಿತ್ತ ತಾಲೂಕು ಕಚೇರಿಗೆ ಆಗಮಿಸಿದ್ದ ವೇಳೆ ಅವರು ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉಪ್ಪಿನಂಗಡಿ ಸಮೀಪದ ಮಠಂತಬೆಟ್ಟು ನಿವಾಸಿಯಾಗಿದ್ದ ನಿರಂಜನ ರೈ ಅವರು ಕೋಡಿಂಬಾಡಿ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ, ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಕಂಬಳ ಸ್ಪರ್ಧೆಗಳಲ್ಲಿ ವೀಕ್ಷಕ ವಿವರಣೆಗಾರರಾಗಿ ಅವರು ವಿಶಿಷ್ಟ ಗುರುತನ್ನು ಮೂಡಿಸಿಕೊಂಡಿದ್ದರು. ಕಂಬಳದ ಬಗ್ಗೆ ಹೊಂದಿದ್ದ ಆಳವಾದ ಜ್ಞಾನ, ಸ್ಪಷ್ಟ ನಿರೂಪಣೆ ಹಾಗೂ ವಿಶಿಷ್ಟ ನಿರೂಪಣಾ ಶೈಲಿಯಿಂದ ಕಂಬಳ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಅವರ ನಿಧನದಿಂದ ಕಾಂಗ್ರೆಸ್ ಪಕ್ಷ, ಕಂಬಳ ವಲಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ನಿರಂಜನ ರೈ ಅವರ ನಿಧನಕ್ಕೆ ವಿವಿಧ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಸಂತಾಪ ಸೂಚಿಸಿದ್ದಾರೆ.