ನೀಟ್ ಹಗರಣ: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆ– ಉಡುಪಿಯಲ್ಲಿ ಕಾಂಗ್ರೆಸ್‌ನಿಂದ ಸಂಭ್ರಮಾಚರಣೆ
Saturday, July 25, 2026
ನೀಟ್ ಹಗರಣಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ನೀಡಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಂಭ್ರಮಾಚರಣೆ ನಡೆಯಿತು.
ಉಡುಪಿಯ ಕಾಂಗ್ರೆಸ್ ಭವನದ ಎದುರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಸಂಭ್ರಮಾಚರಣೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡರು, ನೀಟ್ ಹಗರಣದ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿದ್ದು, ವಿದ್ಯಾರ್ಥಿಗಳ ಹೋರಾಟ ಮತ್ತು ಕಾಂಗ್ರೆಸ್ ಪಕ್ಷದ ನಿರಂತರ ಒತ್ತಾಯಕ್ಕೆ ಇದು ದೊರೆತ ಜಯ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಪರವಾಗಿ ನೀಟ್ ಹಗರಣದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರಂತರವಾಗಿ ಧ್ವನಿ ಎತ್ತಿದ್ದು, ದೇಶದಲ್ಲಿ ಬದಲಾವಣೆಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದರು.
ಈ ಹಿಂದೆ ಎಐಸಿಸಿ ಸೂಚನೆಯಂತೆ ನೀಟ್ ಹಗರಣ ಖಂಡಿಸಿ ಮೊಂಬತ್ತಿ ಬೆಳಗಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆ ಪ್ರತಿಭಟನೆಯನ್ನು ರದ್ದುಗೊಳಿಸಿ ಸಂಭ್ರಮಾಚರಣೆಯನ್ನು ನಡೆಸಲಾಯಿತು.
ಸಂಭ್ರಮಾಚರಣೆಯಲ್ಲಿ ಎಐಸಿಸಿ ವೀಕ್ಷಕ ಹಿಮ್ಮತ್ ಸಿಂಗ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜಾ, ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಅಲೆವೂರು ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಸೌರಭ್ ಬಲ್ಲಾಳ್, ವಿಶ್ವಾಸ್ ಅಮೀನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
