-->
 ವಯನಾಡಿನಲ್ಲಿ ಭಾರೀ ಭೂ ಕುಸಿತ: ಅವಶೇಷಗಳಡಿ ಕಾರ್ಮಿಕರು ಸಿಲುಕಿರುವ ಶಂಕೆ

ವಯನಾಡಿನಲ್ಲಿ ಭಾರೀ ಭೂ ಕುಸಿತ: ಅವಶೇಷಗಳಡಿ ಕಾರ್ಮಿಕರು ಸಿಲುಕಿರುವ ಶಂಕೆ


ಸೋಮವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಸಮೀಪದ ಕಲ್ಲಾಡಿ ಪ್ರದೇಶದಲ್ಲಿ ಮಂಗಳವಾರ ಭಾರಿ ಭೂಕುಸಿತ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ ಕೆಲವರು ಸಿಲುಕಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ವಯನಾಡ್ ಮತ್ತು ಮಲಪ್ಪುರಂ ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದ ಕಲ್ಲಾಡಿಯ ಮೀನಾಕ್ಷಿ ಸೇತುವೆ ಬಳಿ ಈ ಭೂಕುಸಿತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿರುವ ಕೋಯಿಕ್ಕೋಡ್–ವಯನಾಡ್ ಅವಳಿ ಸುರಂಗ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಕಾರ್ಮಿಕರನ್ನು ಕಾಮಗಾರಿ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ ಕೆಲವು ವಾಹನಗಳು ಮಣ್ಣಿನಡಿ ಸಿಲುಕಿರುವುದು ಕಂಡುಬಂದಿದೆ. ಸ್ಥಳೀಯರು ಮೂವರು ಕಾರ್ಮಿಕರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಎನ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ನಡೆಸುತ್ತಿವೆ.

2024ರಲ್ಲಿ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಎರಡು ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚಿನ ಭೂಕುಸಿತದ ಬಳಿಕ ಜಿಲ್ಲಾಡಳಿತ ಮತ್ತು ರಕ್ಷಣಾ ತಂಡಗಳು ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿವೆ.

ಕೋಯಿಕ್ಕೋಡ್ ಮತ್ತು ವಯನಾಡ್ ಭಾಗಗಳಿಂದ ಸುರಂಗ ನಿರ್ಮಾಣ ಕಾಮಗಾರಿ ಎರಡೂ ಕಡೆಗಳಿಂದ ನಡೆಯುತ್ತಿದ್ದು, ಕಳೆದ ವರ್ಷ ಆಗಸ್ಟ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಸ್ಥಳದಲ್ಲಿಯೇ ನಿರ್ಮಿಸಲಾಗಿದ್ದ ತಾತ್ಕಾಲಿಕ ಶಿಬಿರಗಳಲ್ಲಿ ವಾಸವಾಗಿದ್ದರು.ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಸವಾಲಿನದ್ದಾಗಿದ್ದು, ಸಿಲುಕಿರುವವರ ಪತ್ತೆಗಾಗಿ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.

Ads on article

Advertise in articles 1

advertising articles 2

Advertise under the article