-->
 ಭಂಡಾರಕೇರಿ ಮಠದ ವತಿಯಿಂದ 10 ಸಾಮವೇದ ವಿದ್ವಾಂಸರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಭಂಡಾರಕೇರಿ ಮಠದ ವತಿಯಿಂದ 10 ಸಾಮವೇದ ವಿದ್ವಾಂಸರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ


ಬಾರಕೂರು ಭಂಡಾರಕೇರಿ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಸತ್ಯತೀರ್ಥ ಪೀಠಾರೋಹಣ ಶತಮಾನೋತ್ಸವದ ಅಂಗವಾಗಿ, ಅವರ ಶಿಷ್ಯರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರ 47ನೇ ಚಾತುರ್ಮಾಸ್ಯ ವ್ರತದ ಶುಭಸಂದರ್ಭದಲ್ಲಿ ಹತ್ತು ಮಂದಿ ಸಾಮವೇದ ವಿದ್ವಾಂಸರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ನೂರು ಮಂದಿ ವೇದವಿದ್ವಾಂಸರ ಸಮ್ಮಾನ ಕಾರ್ಯಕ್ರಮದ ಅಂಗವಾಗಿ ನಡೆದ ಸಮಾರಂಭದಲ್ಲಿ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ವಿವಿಧ ರಾಜ್ಯಗಳ ವಿಶಿಷ್ಟ ಸಾಮವೇದ ಸಾಧಕರಿಗೆ ‘ಸಾಮಗಾನಸುರಾಚಾರ್ಯ’, ‘ಸಾಮೋದ್ಗಾನದೇಶಿಕ’ ಹಾಗೂ ‘ಸಾಮಗಾನಶುಚಿವ್ರತ’ ಮೊದಲಾದ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಶಾಲು ಹೊದಿಸಿ, ಗೌರವ ಸಂಭಾವನೆ ನೀಡಿ ವಿದ್ವಾಂಸರನ್ನು ಸತ್ಕರಿಸಲಾಯಿತು.


ಬಳಿಕ ವಿದ್ವಾಂಸರು ಸಾಮವೇದ ಪಾರಾಯಣ ಯಜ್ಞವನ್ನು ಶ್ರೀಪಾದರ ಮೂಲಕ ಶ್ರೀಕೃಷ್ಣನಿಗೆ ಸಮರ್ಪಿಸಿ ಸಮಾಪ್ತಿಗೊಳಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು, “ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರು ಜ್ಞಾನಸೇವೆಯ ಮೂಲಕ ಶ್ರೀಕೃಷ್ಣನನ್ನು ಒಲಿಸಿಕೊಂಡವರು. ಅವರ ಅತ್ಯುಚ್ಚ ಜ್ಞಾನಸೇವೆಯ ಕಾರ್ಯ ನಡೆದದ್ದು ಇದೇ ಭಂಡಾರಕೇರಿ ಮಠದಲ್ಲಿ. ಅವರು 1925ರಲ್ಲಿ ಸತ್ಯತೀರ್ಥ ಪೀಠವನ್ನಲಂಕರಿಸಿದ್ದರು. ಅವರ ಗೌರವಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದರು.

‘ವೇದಾನಾಂ ಸಾಮವೇದೋಸ್ಮಿ’ ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಸಾಮವೇದದ ಮಹತ್ವವನ್ನು ಸಾರಿದ್ದಾನೆ. ಇಂದಿನ ದಿನಗಳಲ್ಲಿ ಸಾಮವೇದವನ್ನು ಅಧ್ಯಯನ ಮಾಡಿ, ಪಾರಂಪರಿಕವಾಗಿ ಅದರ ಗಾನ ಮತ್ತು ವಿದ್ಯೆಯನ್ನು ಉಳಿಸಿಕೊಂಡು ಬರುತ್ತಿರುವ ವಿದ್ವಾಂಸರು ಅತ್ಯಂತ ವಿರಳರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಈ ವಿದ್ವಾಂಸರು ಅಪಾರ ಶ್ರಮ ಹಾಗೂ ಶ್ರದ್ಧೆಯಿಂದ ಸಾಮವೇದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಶ್ರೀಪಾದರು ಹೇಳಿದರು.

ಒಂಬತ್ತು ದಿನಗಳ ಕಾಲ ನಡೆದ ಸಾಮವೇದ ಗಾನ ಪಾರಾಯಣದಲ್ಲಿ ವಿದ್ವಾಂಸರು ಅತ್ಯಂತ ಶ್ರದ್ಧೆಯಿಂದ ಭಾಗವಹಿಸಿದ್ದು, ಶ್ರೀ ಮಧ್ವವ್ಯಾಸರು ಅವರಿಗೆ ಇನ್ನಷ್ಟು ವಾಙ್ಮಯ ಸೇವೆ ಸಲ್ಲಿಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಶ್ರೀಪಾದರು ಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ವಿದ್ವಾನ್ ಶ್ರೀ ಉದಯಕುಮಾರ ಸರಳತ್ತಾಯರು, ಶ್ರೀ ಕೃಷ್ಣ ಮುಖ್ಯಪ್ರಾಣರ ಗಂಧಪ್ರಸಾದವನ್ನು ಶ್ರೀಪಾದರಿಗೆ ಅರ್ಪಿಸಿ, ಶ್ರೀಪಾದರು ನಡೆಸುತ್ತಿರುವ ಇಂತಹ ಕಾರ್ಯಕ್ರಮಗಳಿಂದ ಇನ್ನಷ್ಟು ವಿದ್ಯಾರ್ಥಿಗಳು ವೇದಾಧ್ಯಯನದತ್ತ ಉತ್ತೇಜಿತರಾಗಲಿ ಎಂದು ಆಶಿಸಿದರು.

ಸಮ್ಮಾನಿತರಾದ ವಿದ್ವಾಂಸರಾದ ಪ್ರಭಾಕರ ಅಡಿಗ, ದತ್ತಾತ್ರೇಯ ಶರ್ಮಾ ಹಾಗೂ ಸುದರ್ಶನ ಸಾಮಗ ಅವರು ಮಾತನಾಡಿ, ಗ್ರಾಮೀಣ ಪರಿಸರದ ಮಧ್ಯದಲ್ಲಿರುವ ಶ್ರೀಮಠದಲ್ಲಿ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ನಡೆಸುತ್ತಿರುವ ಈ ಅಭೂತಪೂರ್ವ ಕಾರ್ಯಕ್ರಮವನ್ನು ಶ್ಲಾಘಿಸಿದರು. ಪಾರಂಪರಿಕ ಸಾಮವೇದ ವಿದ್ಯೆಯನ್ನು ಉಳಿಸಿ ಬೆಳೆಸಲು ಇನ್ನಷ್ಟು ವಿದ್ಯಾರ್ಥಿಗಳು ಮುಂದೆ ಬರಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article