-->
 ನಾಗಸ್ವರ ವಾದಕ ಹೆರ್ಗ ಸುಂದರ ಶೇರಿಗಾರ್ ನಿಧನ

ನಾಗಸ್ವರ ವಾದಕ ಹೆರ್ಗ ಸುಂದರ ಶೇರಿಗಾರ್ ನಿಧನ


ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಖ್ಯಾತ ನಾಗಸ್ವರ ವಾದಕ ಹಾಗೂ ಸ್ಯಾಕ್ಸೋಫೋನ್ ಕಲಾವಿದ ಹೆರ್ಗ ಸುಂದರ ಶೇರಿಗಾರ್ (ಎಳ್ಳಾರೆ) ಅವರು ಸೋಮವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಪರ್ಕಳ, ಉಡುಪಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ವಿವಿಧ ಶುಭ ಸಮಾರಂಭಗಳು, ದೇವಸ್ಥಾನ ಹಾಗೂ ದೈವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಗಸ್ವರ ವಾದನದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಸ್ಯಾಕ್ಸೋಫೋನ್ ವಾದನದಲ್ಲಿಯೂ ವಿಶೇಷ ಪ್ರಾವೀಣ್ಯತೆ ಹೊಂದಿದ್ದರು.

ಸಂಗೀತ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸುಂದರ ಶೇರಿಗಾರ್ ಅವರು ಅಪಾರ ಸಂಖ್ಯೆಯ ಶಿಷ್ಯರನ್ನು ಹೊಂದಿದ್ದು, ಅನೇಕ ಯುವ ಕಲಾವಿದರಿಗೆ ನಾಗಸ್ವರ ವಾದನದ ತರಬೇತಿ ನೀಡಿ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಕಲಾ ಸೇವೆಯನ್ನು ಗುರುತಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಸರಳ ಸಜ್ಜನಿಕೆ ಹಾಗೂ ಕಲಾ ಬದ್ಧತೆಯಿಂದ ಜನಮನ್ನಣೆ ಗಳಿಸಿದ್ದ ಅವರ ನಿಧನದಿಂದ ಕರಾವಳಿಯ ನಾಗಸ್ವರ ಹಾಗೂ ವಾದ್ಯ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಅಗಲಿಕೆಗೆ ಕಲಾವಿದರು, ಶಿಷ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಮೃತರು ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article