ಆ.15,16 ರಂದು ಉಡುಪಿಯಲ್ಲಿ ಔರಾ ಚಿತ್ರಕಲಾ ಪ್ರದರ್ಶನ
ಉಡುಪಿಯ ಕುಂಜಿಬೆಟ್ಟುವಿನ ಔರಾ ಆರ್ಟ್ ಕ್ಲಾಸ್ ಮತ್ತು ಗ್ಯಾಲರಿ ವತಿಯಿಂದ “ಔರಾ ಚಿತ್ರಕಲಾ ಪ್ರದರ್ಶನ – 26” ಆ.15 ಮತ್ತು 16 ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಶೈಲೇಶ್ ಕೋಟ್ಯಾನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕ್ರಿಯೇಟಿವಿಟಿ ಹ್ಯಾಸ್ ನೋ ಲಿಮಿಟ್ಸ್ ಎಂಬ ಆಶಯದೊಂದಿಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಸಂಸ್ಥೆಯ 8 ಮಂದಿ ಕಲಾವಿದರು 30 ಕಲಾಕೃತಿಗಳನ್ನು ಪ್ರದೇಶಿಸಲಿದ್ದಾರೆ ಎಂದರು.
ಪ್ರದರ್ಶನದ ಉದ್ಘಾಟನೆ ಆ.15ರಂದು ಬೆಳಗ್ಗೆ 10 ಗಂಟೆಗೆ ನಡೆಯಲ್ಲಿದ್ದು, ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ಸುನೀತಾ ನಾಯಕ್ ಉದ್ಘಾಟಿಸಲಿದ್ದಾರೆ . ಮುಖ್ಯ ಅತಿಥಿಯಾಗಿ ನಾಡೋಜ ಕೆ.ಪಿ. ರಾವ್ ಭಾಗವಹಿಸಲಿದ್ದಾರೆ. ಕಲಾ ಗುರು ಶೈಲೇಶ್ ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಕಲ್ಪನೆ, ಸೃಜನಶೀಲತೆ ಮತ್ತು ಕಲಾ ಪ್ರತಿಭೆಯನ್ನು ಬಳಸಿಕೊಂಡು ವಿವಿಧ ಕಲಾಕೃತಿಗಳನ್ನು ರಚಿಸಿದ್ದು, ಕಲಾವಿದರಾದ ಲಕ್ಷ್ಮೀ ನಾಯಕ್, ಅನುಪಾ ಶೆಟ್ಟಿ, ಅಂಬಿಕಾ ಗಣೇಶ್, ಪೂರ್ಣ ಪ್ರಭು, ಕಾವ್ಯ ಪ್ರಭು, ತ್ರಿಪಾ, ರಕ್ಷಿತಾ ರಾಕೇಶ್ ಮತ್ತು ನವೀನ್ ನಾಯಕ್ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ವಿವಿಧ ಕಲಾವಿದರ ಸೃಜನಶೀಲತೆ, ಕಲ್ಪನಾಶಕ್ತಿ ಮತ್ತು ಕಲಾ ಪ್ರತಿಭೆಯನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಚಿತ್ರಕಲೆಯ ವಿವಿಧ ಆಯಾಮಗಳನ್ನು ಆಸಕ್ತರು ಸಮೀಪದಿಂದ ವೀಕ್ಷಿಸಲು ಹಾಗೂ ಕಲಾವಿದರ ಕಲಾ ಪ್ರಯತ್ನಗಳನ್ನು ಪ್ರೋತ್ಸಾಹಿಸಲು ಈ ಪ್ರದರ್ಶನ ಉತ್ತಮ ಅವಕಾಶವಾಗಲಿದೆ ಎಂದು ಅವರು ತಿಳಿಸಿದರು.
ಈ ಪ್ರದರ್ಶನದಲ್ಲಿ ಅವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅನಾವರಣಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳ ಕಲಾ ಅಭಿರುಚಿ, ಪರಿಶ್ರಮ ಮತ್ತು ಪ್ರತಿಭೆಗೆ ಈ ಪ್ರದರ್ಶನ ಒಂದು ಉತ್ತಮ ವೇದಿಕೆಯಾಗಿದೆ. ಔರಾ ಆರ್ಟ್ ಕ್ಲಾಸ್ ಮತ್ತು ಗ್ಯಾಲರಿಯ ಕಲಾ ಚಟುವಟಿಕೆಗಳ ಜೊತೆಗೆ ಔರಾ ಆರ್ಟ್ ಫೌಂಡೇಶನ್ ಕೂಡ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಕಲಾ ಶಿಕ್ಷಣದ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಫೌಂಡೇಶನ್ ವತಿಯಿಂದ ವಿವಿಧ ಉಚಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ವಿಶೇಷವಾಗಿ ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣ ಹಾಗೂ ಕಲಾ ತರಬೇತಿ ದೊರಕುವಂತೆ ಮಾಡುವ ಮೂಲಕ ಅವರಲ್ಲಿರುವ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಪ್ರಯತ್ನವನ್ನು ಔರಾ ಆರ್ಟ್ ಫೌಂಡೇಶನ್ ಮಾಡುತ್ತಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುವ ಮೂಲಕ, ಶಿಕ್ಷಣದ ಅವಕಾಶ ಎಲ್ಲರಿಗೂ ಸಮಾನವಾಗಿ ದೊರೆಯಬೇಕು ಎಂಬ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಲೆಯನ್ನು ಕೇವಲ ಹವ್ಯಾಸವಾಗಿ ನೋಡದೆ, ಅದು ಮಕ್ಕಳ ವ್ಯಕ್ತಿತ್ವ ವಿಕಸನ, ಸೃಜನಶೀಲ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಪ್ರಮುಖ ಸಾಧನ ಎಂಬ ನಂಬಿಕೆಯೊಂದಿಗೆ ಔರಾ ಸಂಸ್ಥೆ ತನ್ನ ಕಲಾ ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಮುಂದುವರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಆಯೋಜಿಸಿರುವ “ಔರಾ ಚಿತ್ರಕಲಾ ಪ್ರದರ್ಶನ – 26” ಕಲಾವಿದರಿಗೆ ತಮ್ಮ ಕಲಾಕೃತಿಗಳನ್ನು ಸಾರ್ವಜನಿಕರ ಮುಂದೆ ಪರಿಚಯಿಸುವ ವೇದಿಕೆಯಾಗುವುದರ ಜೊತೆಗೆ, ಕಲಾಸಕ್ತರಿಗೆ ಹೊಸ ಕಲಾ ಅನುಭವವನ್ನು ನೀಡುವ ಪ್ರಯತ್ನವೂ ಆಗಿದೆ.
ಚಿತ್ರಕಲೆಯ ಬಣ್ಣಗಳು, ರೇಖೆಗಳು, ಭಾವನೆಗಳು ಮತ್ತು ಕಲ್ಪನೆಗಳು ಒಂದೇ ಸೂರಿನಡಿ ಅನಾವರಣಗೊಳ್ಳಲಿರುವ ಈ ಪ್ರದರ್ಶನವು ಕಲಾಸಕ್ತರಿಗೆ ವಿಶೇಷ ಅನುಭವ ನೀಡುವ ನಿರೀಕ್ಷೆಯಿದೆ. ಉಡುಪಿ ಮತ್ತು ಸುತ್ತಮುತ್ತಲಿನ ಕಲಾಸಕ್ತರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರದರ್ಶನವನ್ನು ವೀಕ್ಷಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಔರಾ ಆರ್ಟ್ ಕ್ಲಾಸ್ ಮತ್ತು ಗ್ಯಾಲರಿ ಹಾಗೂ ಔರಾ ಆರ್ಟ್ ಫೌಂಡೇಶನ್ ವತಿಯಿಂದ ಆಹ್ವಾನಿಸಲಾಗಿದೆ. ಪ್ರದರ್ಶನವು ಆ. 15 ಮತ್ತು 16ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಲಕ್ಷ್ಮೀನಾಯಕ್ ಅಂಬಿಕಾ ಗಣೇಶ್ ಹಾಗೂ ಅನುಷ ಶೆಟ್ಟಿ ಉಪಸ್ಥಿತರಿದ್ದರು.