ಅಧಿಕ ಬಡ್ಡಿ ಸಾಲ ನೀಡಿ ಕಿರುಕುಳ ನೀಡಿದ ಪ್ರಕರಣ: ಮೂವರ ಬಂಧನ
ಮಂಗಳೂರಿನ ಸಾನಿಧ್ಯ ಫೈನಾನ್ಸ್ ಮೂಲಕ ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿ ಸಾಲದ ಕಂತು ಬಾಕಿಯಾದ ಸಂದರ್ಭದಲ್ಲಿ ಹಣ ಪಾವತಿಸುವಂತೆ ಕಿರುಕುಳ ನೀಡಿದ ಆರೋಪದಲ್ಲಿ ಮೂವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಕುಲಾಯಿ ನಿವಾಸಿ ಸಂದೀಪ್ ಶೆಟ್ಟಿ, ಕಾವೂರು ನಿವಾಸಿ ವಿಜೀತ್ ಶೆಟ್ಟಿ ಹಾಗೂ ಸಂಪತ್ ಬಂಧಿತರು. ಕುಂಜಾಲ್ ನಿವಾಸಿ ಗಣೇಶ್ ಗಾಣಿಗ ಅವರಿಗೆ ಸೇರಿದ KA-03-HF-8253 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲ್‌ನ್ನು ಅಧಿಕ ಬಡ್ಡಿ ಸಾಲದ ವಿಚಾರದಲ್ಲಿ ಬಲವಂತವಾಗಿ ತೆಗೆದುಕೊಂಡು ಹೋಗಿರುವುದಲ್ಲದೆ, ಸಾಲಕ್ಕೆ ಜಾಮೀನುದಾರರಾಗಿದ್ದ ರಾಜೇಶ್ ನಾಯ್ಕ ಎಂಬುವವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ರಾಜೇಶ್ ನಾಯ್ಕ ಅವರು ನೀಡಿದ ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಬಲವಂತವಾಗಿ ತೆಗೆದುಕೊಂಡು ಹೋಗಿದ್ದ ಮೋಟಾರು ಸೈಕಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ತನಿಖೆಯ ಸಂದರ್ಭದಲ್ಲಿ ವಶಕ್ಕೆ ಪಡೆದಿದ್ದಾರೆ. ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಅಶೋಕ ಮಾಳಾಬಗಿ ನೇತೃತ್ವದಲ್ಲಿ ಸಿಬ್ಬಂದಿ ಕಿರಣ್ ಮತ್ತು ಸಿದ್ದಪ್ಪ ಸಕೆನಳ್ಳಿ ಕಾರ್ಯಾಚರಣೆ ನಡೆಸಿದ್ದಾರೆ.