ಉಡುಪಿ ಜಿಲ್ಲೆಯ ಮೊದಲ ಮಹಿಳಾ ಕಮರ್ಷಿಯಲ್ ಪೈಲಟ್ ಆಗಿ ಶೈನಿ ಅಸ್ಮಾ ಸಲ್ದಾನ್ಹಾ ಸಾಧನೆ
ಉಡುಪಿ ಜಿಲ್ಲೆಯ ವಾಯುಯಾನ ಕ್ಷೇತ್ರದಲ್ಲಿ ಕೌಡೂರಿನ ಶೈನಿ ಅಸ್ಮಾ ಸಲ್ದಾನ್ಹಾ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಮರ್ಷಿಯಲ್ ಪೈಲಟ್ ಲೈಸೆನ್ಸ್ (CPL) ಪಡೆದಿರುವ ಅವರು, ಈ ಅರ್ಹತೆ ಪಡೆದ ಉಡುಪಿ ಜಿಲ್ಲೆಯ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೌಡೂರಿನ ರಂಗಣಪಲ್ಕೆಯ ಅಶೋಕ್ ಜೇಕಬ್ ಸಲ್ದಾನ್ಹಾ ಹಾಗೂ ಮಾರಿಯಾ ಗ್ರೆಟ್ನಾ ಸಲ್ದಾನ್ಹಾ ದಂಪತಿಯ ಪುತ್ರಿಯಾಗಿರುವ ಶೈನಿ, ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
ಪೈಲಟ್ ಆಗುವ ಬಾಲ್ಯದ ಕನಸನ್ನು ನನಸಾಗಿಸುವ ಸಂಕಲ್ಪದೊಂದಿಗೆ ಶೈನಿ ಬೆಂಗಳೂರಿನಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ (IGRUA) ಪ್ರವೇಶ ಪರೀಕ್ಷೆ ಬರೆದು ಯಶಸ್ವಿಯಾಗಿ ಉತ್ತೀರ್ಣರಾದರು. ಬಳಿಕ 2023ರ ಆಗಸ್ಟ್‌ನಲ್ಲಿ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ IGRUAದಲ್ಲಿ ವೃತ್ತಿಪರ ಪೈಲಟ್ ತರಬೇತಿಗೆ ಸೇರ್ಪಡೆಗೊಂಡರು.
ತರಬೇತಿಯ ವಿವಿಧ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಶೈನಿ ಇದೀಗ ಕಮರ್ಷಿಯಲ್ ಪೈಲಟ್ ಲೈಸೆನ್ಸ್ (CPL) ಪಡೆದುಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಅವರ ವೃತ್ತಿಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ವಾಯುಯಾನ ಕ್ಷೇತ್ರದಲ್ಲಿ ವೃತ್ತಿ ರೂಪಿಸಿಕೊಳ್ಳಲು ಬಯಸುವ ಉಡುಪಿ ಜಿಲ್ಲೆಯ ಯುವತಿಯರಿಗೆ ಅವರು ಮಾದರಿಯಾಗಿದ್ದಾರೆ.
ವಾಯುಯಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಶೈನಿ ಅಸ್ಮಾ ಸಲ್ದಾನ್ಹಾ ಅವರ ಸಾಧನೆ ವಿಶೇಷ ಗಮನ ಸೆಳೆದಿದೆ. ಅವರ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಹಾಗೂ ಕಾರ್ಕಳದ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.