ಪಿಂಚಣಿದಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉಡುಪಿ ಪಿಎಫ್ ಕಚೇರಿ ಎದುರು ಪ್ರತಿಭಟನೆ
ಪಿಂಚಣಿದಾರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರ ಹಕ್ಕಿನ ಹಣವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯವನ್ನು ಕಾಪಾಡಬೇಕು. ಅಧಿಕಾರಿಗಳು ಕೂಡ ಕಾರ್ಮಿಕರು ಹಾಗೂ ಪಿಂಚಣಿದಾರರ ಬಗ್ಗೆ ತಮ್ಮ ಮನೋಭಾವವನ್ನು ಬದಲಿಸಿಕೊಂಡು ಮಾನವೀಯ ದೃಷ್ಟಿಕೋನದಿಂದ ನಡೆದುಕೊಳ್ಳಬೇಕು ಎಂದು ಹಂಚು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ನರಸಿಂಹ ಆಗ್ರಹಿಸಿದರು.
ಭವಿಷ್ಯ ನಿಧಿ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ ಪಿಂಚಣಿಯನ್ನು 9,000 ರೂಪಾಯಿಗೆ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭವಿಷ್ಯ ನಿಧಿ ಪಿಂಚಣಿದಾರರ ಸಂಘದ ವತಿಯಿಂದ ಉಡುಪಿ ಪಿ.ಎಫ್ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳುವ ಜನಪ್ರತಿನಿಧಿಗಳು, ಸಮಾಜಕ್ಕೆ ತಮ್ಮ ಶ್ರಮವನ್ನು ನೀಡಿದ ಕಾರ್ಮಿಕರಿಗೆ ಕನಿಷ್ಠ ಪಿಂಚಣಿ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯ. ಸರ್ಕಾರ ವಿವಿಧ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದೆ. ಆದರೆ, ತಮ್ಮ ದುಡಿಮೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ ಪಿಂಚಣಿದಾರರಿಗೆ ಅವರ ಹಕ್ಕಿನ ಹಣವನ್ನು ನೀಡಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಅಪರಾಧಿಗಳಿಗೆ ಜೈಲಿನಲ್ಲಿ ಊಟ, ವಸತಿ ಹಾಗೂ ಇತರ ಸೌಲಭ್ಯಗಳಿಗಾಗಿ ಸರ್ಕಾರ ಹಣ ಖರ್ಚು ಮಾಡುತ್ತಿದೆ. ಆದರೆ, ಸಮಾಜದ ಅಭಿವೃದ್ಧಿಗೆ ತಮ್ಮ ಶ್ರಮವನ್ನು ಧಾರೆ ಎರೆದ ಕಾರ್ಮಿಕರಿಗೆ ಕನಿಷ್ಠ ಪಿಂಚಣಿಗಾಗಿ ತಿಂಗಳಿಗೆ ಒಂಬತ್ತು ಸಾವಿರ ರೂಪಾಯಿ ನೀಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ನೋವಿನ ಸಂಗತಿ ಎಂದು ನರಸಿಂಹ ಹೇಳಿದರು.
ಕಾರ್ಮಿಕ ವರ್ಗದ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳಲ್ಲಿರುವ ಕೀಳರಿಮೆಯ ಮನೋಭಾವ ಬದಲಾಗಬೇಕು. ಕಾರ್ಮಿಕರ ಶ್ರಮ ಮತ್ತು ಸೇವೆಯನ್ನು ಗೌರವಿಸಿ, ಅವರಿಗೆ ಗೌರವಯುತವಾಗಿ ಬದುಕಲು ಅಗತ್ಯವಾದ ಕನಿಷ್ಠ ಪಿಂಚಣಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಸುಕುಮಾರ್ ಮಾತನಾಡಿ, ಬೀಡಿ ಕಾರ್ಮಿಕರು ಸೇರಿದಂತೆ ಕಾರ್ಮಿಕ ವರ್ಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ₹10 ಸಾವಿರ ಕೋಟಿ ಹಣವಿದ್ದರೂ ಹಣದ ಕೊರತೆಯ ನೆಪ ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಪಿಂಚಣಿದಾರರಿಗೆ ಯಾವುದೇ ಸಮರ್ಪಕ ಅನುದಾನ ನೀಡಲಾಗುತ್ತಿಲ್ಲ ಎಂದು ಅವರು ದೂರಿದರು. ಪ್ರಧಾನಿ ಸಣ್ಣಪುಟ್ಟ ಕೆಲಸಗಳಿಗೂ ಪ್ರಚಾರ ಪಡೆದುಕೊಳ್ಳುತ್ತಾರೆ. ಆದರೆ ಕಾರ್ಮಿಕರ ಸಮಸ್ಯೆಗಳ ಕುರಿತು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ ಎಂದು ಸುಕುಮಾರ್ ಟೀಕಿಸಿದರು.
1995ರಲ್ಲಿ ಯೋಜನೆ ಜಾರಿಯಾದ ಸಂದರ್ಭದಲ್ಲಿ ಕಾರ್ಮಿಕರಿಗೆ ನೀಡಲಾಗುತ್ತಿದ್ದ ಹಲವು ಸೌಲಭ್ಯಗಳನ್ನು 2008ರಲ್ಲಿ ಕೈಬಿಡಲಾಗಿದೆ. ಈ ಸೌಲಭ್ಯಗಳನ್ನು ಮರುಜಾರಿಗೊಳಿಸುವುದರ ಜೊತೆಗೆ ROC ಹಾಗೂ ಕಮಿಟೇಷನ್ ಸೌಲಭ್ಯಗಳನ್ನು ಪುನಃ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಬೀಡಿ ಕಾರ್ಮಿಕರಿಗೆ ಆರೋಗ್ಯ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ದೊರೆಯುವಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವಿಶೇಷ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಬೇಕು. ಕಾರ್ಮಿಕರ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು ಎಂದು ಸುಕುಮಾರ್ ಆಗ್ರಹಿಸಿದರು.
ಬಳಿಕ ಭವಿಷ್ಯ ನಿಧಿ ಸಂಸ್ಥೆಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಶಶಿಕಾಂತ್ ದಹಿಯಾ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂದರಾದ ಶಶಿಧರ್ ಗೊಲ್ಲ, ಸುರೇಶ ಕಲ್ಲಗಾರ, ಕವಿರಾಜ್, ಮೊದಲಾದವರು ಭಾಗವಹಿಸಿದ್ದರು.
.jpeg)