-->
 ಪುನೀತ್ ಅತ್ತಾವರಗೆ ಉಡುಪಿ ಪ್ರವೇಶ ನಿರ್ಬಂಧ: ವಿಹಿಂಪ ಕಾರ್ಯಾಧ್ಯಕ್ಷ ಸುನಿಲ್ ಕೆ.ಆರ್ ಖಂಡನೆ

ಪುನೀತ್ ಅತ್ತಾವರಗೆ ಉಡುಪಿ ಪ್ರವೇಶ ನಿರ್ಬಂಧ: ವಿಹಿಂಪ ಕಾರ್ಯಾಧ್ಯಕ್ಷ ಸುನಿಲ್ ಕೆ.ಆರ್ ಖಂಡನೆ


ಕಾಪು ಪ್ರಖಂಡದ ಬಜರಂಗದಳದ ವತಿಯಿಂದ ನಡೆಯಲಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮಕ್ಕೆ ಆಗಮಿಸಲಿದ್ದ ಬಜರಂಗದಳದ ಪ್ರಮುಖರಾದ ಪುನೀತ್ ಅತ್ತಾವರ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರಿಗೆ ಉಡುಪಿ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿರುವ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಸುನಿಲ್ ಕೆ.ಆರ್. ತೀವ್ರವಾಗಿ ಖಂಡಿಸಿದ್ದಾರೆ.

ದೇಶ ವಿಭಜನೆಯ ಇತಿಹಾಸವನ್ನು ಜನರಿಗೆ ತಿಳಿಸಿ, ಜಾಗೃತಿ ಮೂಡಿಸುವ ಉದ್ದೇಶದಿಂದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸುವ ಮೂಲಕ ಹಿಂದೂಗಳ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ. ಹಿಂದೂ ಸಂಘಟನೆಗಳ ಮುಖಂಡರಿಗೆ ನಿರ್ಬಂಧ ವಿಧಿಸುವ ಮೂಲಕ ಹಿಂದುತ್ವದ ಕಾರ್ಯದಿಂದ ನಮ್ಮನ್ನು ವಿಮುಖಗೊಳಿಸಬಹುದು ಎಂಬುದು ಮೂರ್ಖತನ. ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ಹಲವು ನಿರ್ಬಂಧ ಹಾಗೂ ನಿಷೇಧಗಳನ್ನು ಎದುರಿಸಿಯೇ ತನ್ನ ಕಾರ್ಯವನ್ನು ಮುಂದುವರಿಸಿಕೊಂಡು ಬಂದಿದೆ ಎಂದು ಸುನಿಲ್ ಕೆ.ಆರ್. ಹೇಳಿದ್ದಾರೆ.

ಹಿಂದೂ ವಿರೋಧಿ ಧೋರಣೆಗಳನ್ನು ಜಿಲ್ಲಾಡಳಿತ ಕೂಡಲೇ ಕೈಬಿಡಬೇಕು. ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿಧಿಸಿರುವ ಎಲ್ಲಾ ನಿರ್ಬಂಧಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.


 

Ads on article

Advertise in articles 1

advertising articles 2

Advertise under the article