ಉಡುಪಿಯ ಇನ್ಶಾ ತಸ್ಕೀನ್ ವಾಣಿಜ್ಯ ಪೈಲಟ್ ಆಗಿ ಐತಿಹಾಸಿಕ ಸಾಧನೆ
Monday, August 17, 2026
ಉಡುಪಿ ತಾಲೂಕಿನ ಬೈಲೂರು ನಿವಾಸಿ ಇನ್ಶಾ ತಸ್ಕೀನ್ ಅವರು ವಾಣಿಜ್ಯ ಪೈಲಟ್ ಆಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದು, ಉಡುಪಿ ತಾಲೂಕಿನ ಮೊದಲ ವಾಣಿಜ್ಯ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೊರಂಗ್ರಪಾಡಿ ಬೈಲೂರು ನಿವಾಸಿ ಇಕ್ಲಾಕ್ ಅಹಮ್ಮದ್ ಹಾಗೂ ಸೈಯದ್ ತಬಸ್ಸುಮ್ ದಂಪತಿಯ ಪುತ್ರಿಯಾಗಿರುವ ಇನ್ಶಾ ತಸ್ಕೀನ್ ಅವರು, ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ವಾಣಿಜ್ಯ ಪೈಲಟ್ ಆಗಬೇಕೆಂಬ ಕನಸನ್ನು ನನಸಾಗಿಸಲು ದೃಢನಿಶ್ಚಯದಿಂದ ತರಬೇತಿಗೆ ಮುಂದಾದರು.
ವಾಣಿಜ್ಯ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸುವ ಉದ್ದೇಶದಿಂದ ಅವರು Red Bird Flight Training Academyಯಲ್ಲಿ ಮೂರು ವರ್ಷಗಳ ಕಠಿಣ ತರಬೇತಿ ಪಡೆದರು. ತರಬೇತಿಯ ಅವಧಿಯಲ್ಲಿ ಶಿಸ್ತು, ಸಮರ್ಪಣೆ, ಆತ್ಮವಿಶ್ವಾಸ ಹಾಗೂ ನಿರಂತರ ಪರಿಶ್ರಮದೊಂದಿಗೆ ತಮ್ಮ ಗುರಿಯತ್ತ ಮುನ್ನಡೆದ ಇನ್ಶಾ, ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿ ಫೆಬ್ರವರಿ 2026ರಲ್ಲಿ Commercial Pilot Licence (CPL) ಪಡೆದುಕೊಂಡಿದ್ದಾರೆ.
ಬಾಲ್ಯದಿಂದಲೂ ಆಕಾಶದಲ್ಲಿ ಹಾರುವ ಕನಸು ಕಂಡಿದ್ದ ಇನ್ಶಾ ತಸ್ಕೀನ್, ತಮ್ಮ ಪರಿಶ್ರಮ ಹಾಗೂ ದೃಢಸಂಕಲ್ಪದ ಮೂಲಕ ಆ ಕನಸನ್ನು ನನಸಾಗಿಸಿದ್ದಾರೆ. ಅವರ ಈ ಸಾಧನೆಯು ಯುವತಿಯರಿಗೆ, ವಿಶೇಷವಾಗಿ ವಿಮಾನಯಾನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಪ್ರೇರಣೆಯಾಗಿದೆ.
ಇನ್ಶಾ ಅವರ ಸಾಧನೆಯಿಂದ ಕುಟುಂಬಸ್ಥರು, ಬಂಧು-ಬಳಗ ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.
.jpeg)