-->
ಹಿರಿಯ ಸಾಹಿತಿ, ಮೇಧಾವಿ ವಿದ್ವಾನ್ ವರದರಾಜ ಬಲ್ಲಾಳ್ ಇನ್ನಿಲ್ಲ

ಹಿರಿಯ ಸಾಹಿತಿ, ಮೇಧಾವಿ ವಿದ್ವಾನ್ ವರದರಾಜ ಬಲ್ಲಾಳ್ ಇನ್ನಿಲ್ಲ


ಸಾಹಿತಿ, ಲೇಖಕ, ಚಿಂತಕ ಹಾಗೂ ವಿದ್ವಾಂಸರಾದ ವರದರಾಜ ಬಲ್ಲಾಳ್ ಅವರು ಆ.12ರಂದು ಕಿದಿಯೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 97 ವರ್ಷ ವಯಸ್ಸಾಗಿತ್ತು.

1930ರಲ್ಲಿ ಜನಿಸಿದ ವರದರಾಜ ಬಲ್ಲಾಳ್ ಅವರು ಉಡುಪಿಯ ಸಂಸ್ಕೃತ ಮಹಾಪಾಠಶಾಲೆಯಲ್ಲಿ 10 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ 37 ವರ್ಷಗಳ ಕಾಲ ಹಿಂದಿ ಭಾಷಾ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದರು.

ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು ‘ಸುಗುಣಮಾಲಾ’, ‘ಸಾಕ್ಷಿ’, ‘ಚಿಂತನ’ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ನಿರಂತರವಾಗಿ ಬರಹಗಳನ್ನು ಪ್ರಕಟಿಸುತ್ತಿದ್ದರು. ಜಿಡ್ಡು ಕೃಷ್ಣಮೂರ್ತಿಯವರ ಚಿಂತನೆಗಳು ಹಾಗೂ ‘ಯೋಗವಾಸಿಷ್ಠ’ದ ಕುರಿತು ಅವರು ನೀಡಿದ ಉಪನ್ಯಾಸಗಳು ಆಕಾಶವಾಣಿಯಲ್ಲಿ ಹಲವು ಬಾರಿ ಪ್ರಸಾರವಾಗಿದ್ದವು. 1990ರ ದಶಕದಲ್ಲಿ ಬೆಂಗಳೂರಿನ ರಾಮಕೃಷ್ಣ ಆಶ್ರಮದಲ್ಲಿಯೂ ಇದೇ ವಿಷಯಗಳ ಕುರಿತು ಒಂದು ವಾರದ ಉಪನ್ಯಾಸ ಸರಣಿ ನಡೆಸಿದ್ದರು.

ಮುಂಬೈನ ಶ್ರೀ ಘನಶ್ಯಾಮದಾಸ ಬಿರ್ಲಾ ಅವರು ರಚಿಸಿದ ಪ್ರಸಿದ್ಧ ಹಿಂದಿ ಕೃತಿ ಕೃಷ್ಣಂ ವಂದೇ ಜಗದ್ಗುರುಂ ಅನ್ನು ಬಲ್ಲಾಳರು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದರು. ಈ ಕೃತಿ ‘ಸುಗುಣಮಾಲಾ’ ಮಾಸಿಕದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಬಳಿಕ ಶ್ರೀ ಗೋಕುಲದಾಸ ಪೈ ಅವರ ಮೂಲಕ ಕೃತಿರೂಪದಲ್ಲಿ ಪ್ರಕಟಗೊಂಡು ಸಾವಿರಾರು ಕೃಷ್ಣಭಕ್ತರಿಗೆ ಉಚಿತವಾಗಿ ಲಭಿಸಿತ್ತು.

1994ರಲ್ಲಿ ಶ್ರೀ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥರು ತಮ್ಮ ದ್ವಿತೀಯ ಪರ್ಯಾಯ ಅವಧಿಯಲ್ಲಿ ಬಲ್ಲಾಳರ ಉಪನ್ಯಾಸವನ್ನು ಆಯೋಜಿಸಿ ಅವರನ್ನು ಅಭಿನಂದಿಸಿದ್ದರು. ಉಡುಪಿ ಶ್ರೀ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥರ ಸಹಪಾಠಿಯಾಗಿದ್ದ ಬಲ್ಲಾಳರನ್ನು ಶ್ರೀಪಾದರು ಸಮಾರಂಭವೊಂದರಲ್ಲಿ ವಿಶೇಷವಾಗಿ ಸನ್ಮಾನಿಸಿದ್ದರು. ‘ಸುಗುಣಮಾಲಾ’ ಪತ್ರಿಕೆಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರೂ ಅವರನ್ನು ಗೌರವಿಸಿದ್ದರು.

ಕೆಲವು ದಿನಗಳ ಹಿಂದೆ ಶ್ರೀ ಅದಮಾರು ಮಠದ ಕಿರಿಯ ಪೀಠಾಧಿಪತಿ ಶ್ರೀ ಈಶಪ್ರಿಯತೀರ್ಥರು ಬಲ್ಲಾಳರ ಕಿದಿಯೂರಿನ ಸ್ವಗೃಹಕ್ಕೆ ಭೇಟಿ ನೀಡಿ ಅವರನ್ನು ಅಭಿನಂದಿಸಿದ್ದರು.

ಮೃತರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article