ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ
ಕಾಪು ತಾಲೂಕು ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಆ.7ರಂದು ನಡೆದ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಬಡಾ ಎರ್ಮಾಳ್ ನಿವಾಸಿ ಸದಾನಂದ ದೇವಾಡಿಗ(41) ಹಾಗೂ ಉಚ್ಚಿಲ ಬಡಾ ಗ್ರಾಮದ ನಿವಾಸಿ ಕಿಶೋರ್ (47) ಬಂಧಿತರು.
ಆ.7ರಂದು ಮಧ್ಯಾಹ್ನ ಸುಮಾರು 3.45ರ ವೇಳೆಗೆ ಮೋಟಾರ್ ಸೈಕಲ್‌ನಲ್ಲಿ ಬಂದಿದ್ದ ಆರೋಪಿಗಳ ಪೈಕಿ ಸಹಸವಾರನು ಪಿಸ್ತೂಲ್‌ನಿಂದ ಡೇವಿಡ್ ಡಿಸೋಜಾ ಅವರ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದನು. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಈಗಾಗಲೇ ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದರೆನ್ನಲಾದ ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ವಾಜುಲ್ ಶೇಖ್ ಅಲಿಯಾಸ್ ದೀಪಕ್ ಅವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಆರೋಪಿಗಳ ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ವಿಚಾರಣೆಯಿಂದ ಮೊಹಮ್ಮದ್ ಇರ್ಷಾದ್ ಮತ್ತು ಚಿರಾಗ್ ಪೂಜಾರಿ ಎಂಬವರು ಆರೋಪಿಗಳಿಗೆ ಹಣ ಜಮಾ ಮಾಡಿ ಕೃತ್ಯಕ್ಕೆ ಸಹಕರಿಸಿರುವುದು ಬೆಳಕಿಗೆ ಬಂದಿದ್ದು, ಅವರನ್ನೂ ಬಂಧಿಸಲಾಗಿದೆ. ಇದೀಗ ಕೃತ್ಯಕ್ಕೆ ಹಣಕಾಸಿನ ನೆರವು ನೀಡಿದ ಆರೋಪದಲ್ಲಿ ಸದಾನಂದ ದೇವಾಡಿಗ ಹಾಗೂ ಕಿಶೋರ್ ಅವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾನೆನ್ನಲಾದ ರಾಜು ಎಂಬಾತ ಬೈಂದೂರು ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರರ ಮೇಲೆ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಗಾಯಗೊಂಡಿದ್ದು, ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.