-->
ಗಾಂಧಿಯನ್ನು ದೇಶದ್ರೋಹಿಯಂತೆ ಬಿಂಬಿಸಿ ಗೋಡ್ಸೆಯನ್ನು 'ಹೀರೋ' ಮಾಡುವ ಹುನ್ನಾರ: ಶ್ಯಾಮ್‌ರಾಜ್ ಬಿರ್ತಿ

ಗಾಂಧಿಯನ್ನು ದೇಶದ್ರೋಹಿಯಂತೆ ಬಿಂಬಿಸಿ ಗೋಡ್ಸೆಯನ್ನು 'ಹೀರೋ' ಮಾಡುವ ಹುನ್ನಾರ: ಶ್ಯಾಮ್‌ರಾಜ್ ಬಿರ್ತಿ


ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರು ಇಂದಿಗೂ ಮನುವಾದಿಗಳ ಕಪಿಮುಷ್ಠಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ದಲಿತ ಮುಖಂಡ ಶ್ಯಾಮ್‌ರಾಜ್ ಬಿರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ಹೂಡೆಯ ಆದರ್ಶ್ ಇಸ್ಲಾಮಿಕ್ ಸೆಂಟರ್ ಬಳಿ ಆಯೋಜಿಸಲಾಗಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸದೇ ಹೋಗಿದ್ದರೆ ನಮ್ಮ ಬದುಕು ನಿರಂತರ ಶೋಷಣೆಯಲ್ಲೇ ಮುಳುಗಿರುತ್ತಿತ್ತು. ಇಂದು ನಾವು ತಲೆಯೆತ್ತಿ ಸ್ವಾಭಿಮಾನದಿಂದ ಬದುಕಲು ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ. ಕಳೆದ 20 ವರ್ಷಗಳಿಂದ ದೇಶಕ್ಕಾಗಿ ಜೀವ ಮುಡಿಪಾಗಿಟ್ಟ ಮಹಾತ್ಮ ಗಾಂಧೀಜಿಯವರನ್ನು ದೇಶದ್ರೋಹಿಯಂತೆ ಬಿಂಬಿಸುವ ಹಾಗೂ ಅವರ ಹಂತಕ ನಾಥೂರಾಮ್ ಗೋಡ್ಸೆಯನ್ನು 'ಹೀರೋ' ಮಾಡುವ ವ್ಯವಸ್ಥಿತ ಪ್ರಯತ್ನಗಳು ಸಾಗುತ್ತಿವೆ. ದೇಶದಲ್ಲಿ ನಾಥೂರಾಮ್ ಗೋಡ್ಸೆಯ ಸಂತಾನಗಳು ಆಡಳಿತ ನಡೆಸುತ್ತಿದ್ದು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿವೆ. ಜಾತ್ಯತೀತ ಮೌಲ್ಯಗಳನ್ನು ಬದಿಗೊತ್ತಿ, ಪೌರತ್ವವನ್ನು ಕಸಿದುಕೊಳ್ಳುವ ಹುನ್ನಾರಗಳು ನಡೆಯುತ್ತಿದ್ದು, ಇದನ್ನು ಎದುರಿಸಲು ದಲಿತರು ಮತ್ತು ಅಲ್ಪಸಂಖ್ಯಾತರು ಒಂದಾಗಬೇಕಿದೆ ಎಂದು ಕರೆ ನೀಡಿದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಇದ್ರಿಸ್ ಹೂಡೆ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಯ್ಯದ್ ಫರೀದ್, ಶಹಜಾನ್, ಸಮಾಜಸೇವಕ ಸಾಧು, ಸಲಾಹುದ್ದಿನ್ ನಾಯರ್'ಕೆರೆ, ರಿಯಾಝ್ ಕುಕ್ಕಿಕಟ್ಟೆ, ನಕ್ವಾ ಅಬ್ದುಲ್ ರಝಾಕ್, ಸಾಕೀಬ್ ಹೂಡೆ, ನಿಸಾರ್ ಉಡುಪಿ, ನಿಹಾಲ್ ಕಿದಿಯೂರು, ಜಮೀಲಾ ಸದೀದಾ, ಮಮ್ತಾಝ್ ಬೇಗಮ್ ಹೂಡೆ, ಝೈನುಲ್ಲಾ ಹೂಡೆ, ಅಫ್ವಾನ್ ಬಿ. ಹೂಡೆ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

Ads on article

Advertise in articles 1

advertising articles 2

Advertise under the article