-->
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅವಮಾನ: ಉಡುಪಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅವಮಾನ: ಉಡುಪಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ


ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಂ. ಎ. ಗಫೂರ್ ಆಕ್ರೋಶ ವ್ಯಕ್ತಪಡಿಸಿದರು.


ಉತ್ತರಾಖಂಡದ ಹರಿದ್ವಾರದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ನಂತರ ಆ ಸ್ಥಳವನ್ನು ಶುದ್ಧೀಕರಿಸಿದ ಬಿಜೆಪಿಯ ವಿರುದ್ಧ ಉಡುಪಿ ಬ್ರಹ್ಮಗಿರಿ ಸರ್ಕಲ್‌ನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಉತ್ತರಾಖಂಡದ ಹರಿದ್ವಾರದ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಬಳಿಕ ಆ ಸ್ಥಳವನ್ನು ಶುದ್ಧೀಕರಿಸಿದ ಘಟನೆ ಖಂಡನೀಯ ಎಂದರು.

ಬಿಜೆಪಿ ಹಾಗೂ ಸಂಘ ಪರಿವಾರದ ಮೂಲ ಉದ್ದೇಶವೇ ಸಮಾಜವನ್ನು ಒಡೆಯುವುದಾಗಿದೆ ಎಂದು ಆರೋಪಿಸಿದ ಅವರು, ಖರ್ಗೆ ಅವರಿಗೆ ಅವಮಾನ ಮಾಡುವ ಮೂಲಕ ದೇಶದ 140 ಕೋಟಿ ಜನರಿಗೆ ಅವಮಾನ ಮಾಡಲಾಗಿದೆ. ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಖರ್ಗೆ ಅವರಿಗೆ ಮಾಡಲಾದ ಅವಮಾನವೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಳೆದ ಹನ್ನೆರಡು ವರ್ಷಗಳಿಂದ ದೇಶದ ಸಂವಿಧಾನದ ಮೇಲೆ ದಾಳಿ ನಡೆಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು. ಇತ್ತೀಚಿನ ಬೆಳವಣಿಗೆಗಳಲ್ಲಿ ಎಸ್‌ಐಆರ್ ಹೆಸರಿನಲ್ಲಿ ವಲಸೆ ಕಾರ್ಮಿಕರ ಮತಗಳನ್ನು ತೆಗೆದುಹಾಕುವ ಮೂಲಕ ತನ್ನ ಅಜೆಂಡಾವನ್ನು ಜಾರಿಗೆ ತರಲು ಬಿಜೆಪಿ ಮುಂದಾಗಿದೆ ಎಂದು ದೂರಿದರು.

ದೇಶದ ಶೇ.95ರಷ್ಟು ಜನರನ್ನು ಬಡವರಾಗಿಯೇ ಉಳಿಸಿ, ಕೇವಲ ಶೇ.5ರಷ್ಟು ಜನರನ್ನು ಶ್ರೀಮಂತರನ್ನಾಗಿ ಮಾಡುವ ಉದ್ದೇಶದಿಂದ ಬಡವರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಸೊರಕೆ ಆರೋಪಿಸಿದರು. ಖರ್ಗೆ ಅವರಿಗೆ ಅವಮಾನ ಮಾಡುವ ಮೂಲಕ ಬಿಜೆಪಿಗರು ದೇಶದ ಜನತೆ ತಲೆತಗ್ಗಿಸುವಂತಹ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಸಾದ್ ರಾಜ್ ಕಾಂಚನ್, ಹರಿಪ್ರಸಾದ್ ರೈ, ಪ್ರಖ್ಯಾತ್ ಶೆಟ್ಟಿ, ರಾಜು ಪೂಜಾರಿ, ಜ್ಯೋತಿ ಹೆಬ್ಬಾರ್, ಸೌರಬ್ ಬಲ್ಲಾಳ್, ಎಸ್‌ಟಿ ಘಟಕದ ಜಯರಾಮ್ ಗಣನಾಥ ಎಕ್ಕಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article