-->
ದೋಣಿಯ ಇಂಜಿನ್ ಕೆಟ್ಟು ಸಮುದ್ರ ಮಧ್ಯೆ  ಸಿಲುಕಿದ್ದ ನಾಲ್ವರು ಮೀನುಗಾರರ ರಕ್ಷಣೆ

ದೋಣಿಯ ಇಂಜಿನ್ ಕೆಟ್ಟು ಸಮುದ್ರ ಮಧ್ಯೆ ಸಿಲುಕಿದ್ದ ನಾಲ್ವರು ಮೀನುಗಾರರ ರಕ್ಷಣೆ


ದೋಣಿಯ ಎರಡೂ ಇಂಜಿನ್‌ಗಳು ಕೆಟ್ಟು ಗಂಗೊಳ್ಳಿ ಸಮುದ್ರ ಮಧ್ಯೆ ಸಿಲುಕಿದ್ದ ಮುರ್ಡೇಶ್ವರ ಮೂಲದ ನಾಲ್ವರು ಮೀನುಗಾರರನ್ನು ಆಳ ಸಮುದ್ರ ಮೀನುಗಾರಿಕಾ ಬೋಟ್‌ನ ಮೀನುಗಾರರು ಶುಕ್ರವಾರ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಮುರ್ಡೇಶ್ವರ ಮೂಲದ ರಾಘವೇಂದ್ರ, ಫೈಜಾನ್, ನಾಗೇಂದ್ರ ಹಾಗೂ ಧನು ರಕ್ಷಿಸಲ್ಪಟ್ಟ ಮೀನುಗಾರರು. ಮುರ್ಡೇಶ್ವರ ಮೂಲದ ಮೀನುಗಾರರೊಬ್ಬರು ಮಲ್ಪೆಯಲ್ಲಿ ಖರೀದಿಸಿದ್ದ ‘ಮಹಾಂಕಾಳಿ ಪ್ರಸಾದ್’ ಮೀನುಗಾರಿಕಾ ದೋಣಿ ಗುರುವಾರ ಸಂಜೆ ಮಲ್ಪೆ ಬಂದರಿನಿಂದ ಮುರ್ಡೇಶ್ವರದತ್ತ ಪ್ರಯಾಣ ಬೆಳೆಸಿತ್ತು. ಆದರೆ ಸಮುದ್ರ ಮಧ್ಯೆ ದೋಣಿಯ ಎರಡೂ ಇಂಜಿನ್‌ಗಳು ಕೆಟ್ಟುಹೋದ ಪರಿಣಾಮ ದೋಣಿ ಮುಂದಕ್ಕೆ ಸಾಗಲಾಗದೆ ಸಮುದ್ರದಲ್ಲಿ ಸಿಲುಕಿಕೊಂಡಿತ್ತು.

ದೋಣಿಯಲ್ಲಿದ್ದ ಮೀನುಗಾರರಿಗೆ ಮೊಬೈಲ್ ನೆಟ್‌ವರ್ಕ್ ಲಭ್ಯವಾಗದ ಕಾರಣ ಇತರ ಮೀನುಗಾರರಿಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಅವರ ಮೊಬೈಲ್‌ಗಳೂ ಸ್ವಿಚ್ ಆಫ್ ಆಗಿದ್ದರಿಂದ ಸಂಪರ್ಕ ಕಡಿತಗೊಂಡಿತ್ತು.

ಇದೇ ವೇಳೆ ‘ಮಹಾಂಕಾಳಿ ಪ್ರಸಾದ್’ ದೋಣಿಯೊಂದಿಗೆ ಹೊರಟಿದ್ದ ಮತ್ತೊಂದು ದೋಣಿ ಮುರ್ಡೇಶ್ವರ ತಲುಪಿತ್ತು. ಆದರೆ ಮಹಾಂಕಾಳಿ ಪ್ರಸಾದ್ ದೋಣಿ ಬಂದರು ತಲುಪದ ಹಿನ್ನೆಲೆಯಲ್ಲಿ ದೋಣಿ ನಾಪತ್ತೆಯಾಗಿರುವ ವಿಷಯ ಕುಟುಂಬಸ್ಥರು ಹಾಗೂ ಮೀನುಗಾರರ ಗಮನಕ್ಕೆ ಬಂದಿತ್ತು. ಸುತ್ತಮುತ್ತ ಮೀನುಗಾರಿಕೆ ನಡೆಸುತ್ತಿದ್ದ ಕೆಲವು ದೋಣಿಗಳವರು ಹುಡುಕಾಟ ನಡೆಸಿದರೂ ನಾಪತ್ತೆಯಾಗಿದ್ದ ದೋಣಿಯ ಸುಳಿವು ಸಿಕ್ಕಿರಲಿಲ್ಲ.

ಈ ಸಂದರ್ಭದಲ್ಲಿ ಆಳ ಸಮುದ್ರ ಮೀನುಗಾರಿಕೆ ಮುಗಿಸಿ ಗಂಗೊಳ್ಳಿ ಬಂದರಿಗೆ ಮರಳುತ್ತಿದ್ದ ‘ಮಹಾವೀರ’ ಆಳ ಸಮುದ್ರ ಬೋಟ್‌ನ ಮೀನುಗಾರರ ಕಣ್ಣಿಗೆ ಸಮುದ್ರದಲ್ಲಿ ತೇಲುತ್ತಿದ್ದ ಮಹಾಂಕಾಳಿ ಪ್ರಸಾದ್ ದೋಣಿ ಕಾಣಿಸಿಕೊಂಡಿದೆ. ಕೂಡಲೇ ಕಾರ್ಯಾಚರಣೆ ನಡೆಸಿದ ಅವರು ದೋಣಿಯಲ್ಲಿದ್ದ ನಾಲ್ವರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ನಂತರ ಕೆಟ್ಟುಹೋಗಿದ್ದ ಮಹಾಂಕಾಳಿ ಪ್ರಸಾದ್ ದೋಣಿಯನ್ನು ಎಳೆದುಕೊಂಡು ಗಂಗೊಳ್ಳಿ ಬಂದರಿಗೆ ತರುವಲ್ಲಿಯೂ ಮಹಾವೀರ ಬೋಟ್‌ನ ಮೀನುಗಾರರು ಯಶಸ್ವಿಯಾಗಿದ್ದಾರೆ. ಸಮಯಕ್ಕೆ ಸರಿಯಾಗಿ ನೆರವಿಗೆ ಧಾವಿಸಿ ನಾಲ್ವರು ಮೀನುಗಾರರ ಜೀವ ಉಳಿಸಿದ ಮಹಾವೀರ ಬೋಟ್‌ನ ಮೀನುಗಾರರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article