ವಂದೇ ಮಾತರಂ ವಿವಾದ: ಸೋನಿಯಾ ಗಾಂಧಿ ವಿರುದ್ಧ ಹೈಕೋರ್ಟ್ ಮೊರೆ ಹೋಗುವ ಎಚ್ಚರಿಕೆ
‘ವಂದೇ ಮಾತರಂ’ ಗೀತೆ ಪಠಣದ ವೇಳೆ ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ನೀಡಿರುವ ದೂರಿನ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗುವುದಾಗಿ ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ತಿಳಿಸಿದ್ದಾರೆ.
ಸೋನಿಯಾ ಗಾಂಧಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಎಫ್‌ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿರುವುದಾಗಿ ವಿಕಾಸ್ ಪುತ್ತೂರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಚೇರಿಯಲ್ಲಿ ಧ್ವಜಾರೋಹಣ ಸಮಾರಂಭ ನಡೆಯುತ್ತಿದ್ದ ಸಂದರ್ಭದಲ್ಲಿ ‘ವಂದೇ ಮಾತರಂ’ ಗೀತೆ ನುಡಿಸಲಾಗುತ್ತಿತ್ತು. ಈ ವೇಳೆ ಸೋನಿಯಾ ಗಾಂಧಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು ಹಾಗೂ ಗೀತೆಯನ್ನು ನಿಲ್ಲಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು ಎಂದು ವಿಕಾಸ್ ಪುತ್ತೂರು ಆರೋಪಿಸಿದರು.
“ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ವಂದೇ ಮಾತರಂ ನಮ್ಮ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಸಮಾನವಾಗಿದೆ. ಅದನ್ನು ಯಾರೇ ಅವಮಾನಿಸಿದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದರು.
ಈ ಕುರಿತು ಉರ್ವ ಠಾಣೆಯಲ್ಲಿ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ಮುಂದುವರಿಸುವುದಾಗಿ ವಿಕಾಸ್ ಪುತ್ತೂರು ಹೇಳಿದ್ದಾರೆ.