ಹವಾಮಾನ ಬದಲಾವಣೆಯಿಂದ ಮಿದುಳಿನ ಸೋಂಕುಗಳ ಹೆಚ್ಚಳ: ತಜ್ಞರ ಎಚ್ಚರಿಕೆ
ಬದಲಾಗುತ್ತಿರುವ ಹವಾಮಾನ ಮತ್ತು ಮಳೆಯ ಮಾದರಿಗಳು ಮಿದುಳಿನ ಸೋಂಕುಗಳ ಹರಡುವಿಕೆಯ ಮೇಲೆ ಪರಿಣಾಮ ಬೀರುತ್ತಿದ್ದು, ಇಂತಹ ಸೋಂಕುಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದು ಅಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟರು.
ಮಣಿಪಾಲ ಸೆಂಟರ್ ಫಾರ್ ಇನ್‌ಫೆಕ್ಷಿಯಸ್ ಡಿಸೀಸಸ್ ವತಿಯಿಂದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (ಕೆಎಂಸಿ), ಮಣಿಪಾಲದಲ್ಲಿ ಮಿದುಳಿನ ಸೋಂಕುಗಳ ಕುರಿತು ವಿಚಾರ ಸಂಕಿರಣ ನಡೆಯಿತು. ಕ್ಲಿನಿಕಲ್ ಇನ್‌ಫೆಕ್ಷಿಯಸ್ ಡಿಸೀಸಸ್ ಸೊಸೈಟಿಯ ಟ್ರಾಪಿಕಲ್ ಇನ್‌ಫೆಕ್ಷಿಯಸ್ ಡಿಸೀಸಸ್ ಉಪಸಮಿತಿ, ಕೆಎಂಸಿ ಮಣಿಪಾಲದ ಸಾಂಕ್ರಾಮಿಕ ರೋಗಗಳ ವಿಭಾಗ ಹಾಗೂ ಐಸಿಎಂಆರ್ ಕ್ಲೈಂಬ್-ಇಂಡಿಯಾ ಅಧ್ಯಯನ ತಂಡದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿಐಡಿಎಸ್ ಟ್ರಾಪಿಕಲ್ ಇನ್‌ಫೆಕ್ಷಿಯಸ್ ಡಿಸೀಸಸ್ ಉಪಸಮಿತಿಯ ಅಧ್ಯಕ್ಷರು ಹಾಗೂ ಎಸ್‌ಕೆಐಎಂಎಸ್, ಕಾಶ್ಮೀರದ ಸಾಂಕ್ರಾಮಿಕ ರೋಗಗಳ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥರಾದ ಪ್ರೊ. ಅಜಾಜ್ ನಬಿ ಕೌಲ್ ಅವರು ಉದ್ಘಾಟನಾ ಭಾಷಣ ಮಾಡಿದರು.
ವೈಜ್ಞಾನಿಕ ಗೋಷ್ಠಿಯಲ್ಲಿ ಮೂರು ತಜ್ಞ ಉಪನ್ಯಾಸಗಳು ನಡೆದವು. ಡಾ. ಕವಿತಾ ಸರವು ಅವರು ಭಾರತದಲ್ಲಿ ಮೆನಿಂಗೊಎನ್ಸೆಫಲೈಟಿಸ್‌ನ ಚಿಕಿತ್ಸಾ ವಿಧಾನಗಳ ಕುರಿತು ಮಾತನಾಡಿದರು. ಮಾಹೆಯ ಎಂಸಿಎಚ್‌ಪಿಯ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಕವಿತಾ ಶೆಟ್ಟಿಗಾರ್ ಅವರು ಮೆನಿಂಗೊಎನ್ಸೆಫಲೈಟಿಸ್‌ಗೆ ಕಾರಣವಾಗುವ ರೋಗಾಣುಗಳ ಆರಂಭಿಕ ಪತ್ತೆಗೆ ನೆರವಾಗುವ ಆಣ್ವಿಕ ರೋಗನಿರ್ಣಯ ವಿಧಾನಗಳ ಕುರಿತು ಮಾಹಿತಿ ನೀಡಿದರು. ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ನರವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಏಂಜಲ್ ಮಿರಾಕ್ಲಿನ್ ಅವರು ಲಿಂಫೋಸೈಟಿಕ್ ಮೆನಿಂಜೈಟಿಸ್, ಕ್ಷಯರೋಗ ಹಾಗೂ ಸಂಬಂಧಿತ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಉಪನ್ಯಾಸಗಳ ಬಳಿಕ ಮಿದುಳಿನ ಸೋಂಕುಗಳಿಗೆ ಸಂಬಂಧಿಸಿದ ಪ್ರಮುಖ ಪ್ರಕರಣಗಳ ಕುರಿತು ಸಂವಾದಾತ್ಮಕ ಪ್ಯಾನೆಲ್ ಚರ್ಚೆ ನಡೆಯಿತು. ಡಾ. ಏಂಜಲ್ ಮಿರಾಕ್ಲಿನ್, ಕೆಎಂಸಿ ಮಣಿಪಾಲದ ಡಾ. ಅರವಿಂದ್ ಎನ್. ಪ್ರಭು, ಡಾ. ಮುರಳೀಧರ ವರ್ಮ, ಡಾ. ಪೃಥ್ವಿಶ್ರೀ ರವೀಂದ್ರ ಹಾಗೂ ಕೆಎಂಸಿ ಮಂಗಳೂರಿನ ಡಾ. ಶರತ್ ಪಿ. ಎಸ್. ಅವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಮಿದುಳಿನ ಸೋಂಕುಗಳಲ್ಲಿ ಹಲವು ಸೋಂಕುಗಳು ಸ್ಥಳೀಯ ಹವಾಮಾನ ಪರಿಸ್ಥಿತಿಗಳೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂದು ತಜ್ಞರು ಚರ್ಚೆಯಲ್ಲಿ ಅಭಿಪ್ರಾಯಪಟ್ಟರು. ಬದಲಾಗುತ್ತಿರುವ ಹವಾಮಾನ ಹಾಗೂ ಮಳೆಯ ಮಾದರಿಗಳು ಇಂತಹ ಸೋಂಕುಗಳ ಹರಡುವಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಈ ಕುರಿತು ಹೆಚ್ಚಿನ ಜಾಗೃತಿ ಹೊಂದಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಸಿ, ಮಾಹೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಪ್ರಾಧ್ಯಾಪಕರು ಹಾಗೂ ಘಟಕ ಮುಖ್ಯಸ್ಥರು ಮತ್ತು ಎಂಎಸಿ ಐಡಿ ಸಂಯೋಜಕರಾದ ಡಾ. ಕವಿತಾ ಸರವು , “ಮಿದುಳಿನ ಸೋಂಕುಗಳು ಅನೇಕ ಬಾರಿ ಗಮನಕ್ಕೆ ಬಾರದೆ ಹೋಗುತ್ತವೆ ಅಥವಾ ತಡವಾಗಿ ಪತ್ತೆಯಾಗುತ್ತವೆ. ಇದರಿಂದ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ. ನಮ್ಮ ಪ್ರದೇಶದಲ್ಲಿ ಬದಲಾಗುತ್ತಿರುವ ಹವಾಮಾನ ಮತ್ತು ಮಳೆಯ ಮಾದರಿಗಳು ಇಂತಹ ಹಲವು ಸೋಂಕುಗಳ ಹರಡುವಿಕೆಯ ಮೇಲೆ ನೇರ ಪರಿಣಾಮ ಬೀರುತ್ತಿರುವುದನ್ನು ನಾವು ಈಗ ಕಾಣುತ್ತಿದ್ದೇವೆ. ಆರಂಭಿಕ ರೋಗನಿರ್ಣಯ, ಉತ್ತಮ ಪ್ರಯೋಗಾಲಯ ಬೆಂಬಲ ಹಾಗೂ ವಿವಿಧ ವಿಭಾಗಗಳ ವೈದ್ಯರು ಒಟ್ಟಾಗಿ ಕೆಲಸ ಮಾಡಿದರೆ ಅನೇಕ ಜೀವಗಳನ್ನು ಉಳಿಸಬಹುದು ಎಂದರು. ಎಂಬಿಬಿಎಸ್ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ವಿವಿಧ ವಿಭಾಗಗಳ ವೈದ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಧೀನಾ ಜೋಮನ್ ಕಾರ್ಯಕ್ರಮ ನಿರೂಪಿಸಿದರು.ಡಾ. ಕವಿತಾ ಸರವು ಸ್ವಾಗತಿಸಿ, ಗೌತಮಿ ಎ. ವಂದನಾರ್ಪಣೆ ಸಲ್ಲಿಸಿದರು.