‘ವಂದೇ ಮಾತರಂ’ ಅವಮಾನಿಸಿದರೆ ಶಿಕ್ಷೆ: ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಸ್ತು
Tuesday, August 11, 2026
‘ವಂದೇ ಮಾತರಂ’ ಗೀತೆಗೆ ರಾಷ್ಟ್ರಗೀತೆಯಂತೆಯೇ ಶಾಸನಬದ್ಧ ಕಾನೂನು ರಕ್ಷಣೆ ನೀಡುವ ಮಹತ್ವದ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಒಪ್ಪಿಗೆ ನೀಡಿದ್ದಾರೆ.
ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ(ತಿದ್ದುಪಡಿ) ಮಸೂದೆ –2026 ಪ್ರಕಾರ ‘ವಂದೇ ಮಾತರಂ’ ಹಾಡುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಅವಮಾನ ಮಾಡುವುದು ಅಥವಾ ಹಾಡುವಿಕೆಗೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಈ ಮೂಲಕ ರಾಷ್ಟ್ರಗೀತೆಗೆ ನೀಡಲಾಗಿರುವ ಕಾನೂನು ರಕ್ಷಣೆಯನ್ನೇ ‘ವಂದೇ ಮಾತರಂ’ಗೂ ವಿಸ್ತರಿಸಿದಂತಾಗಿದೆ.
ತಿದ್ದುಪಡಿ ಮಸೂದೆಯ ಅನ್ವಯ, ‘ವಂದೇ ಮಾತರಂ’ಗೆ ಸಂಬಂಧಿಸಿದಂತೆ ಉದ್ದೇಶಪೂರ್ವಕ ಅವಮಾನ ಅಥವಾ ಅಡ್ಡಿಪಡಿಸುವ ಕೃತ್ಯಗಳಿಗೆ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
ರಾಷ್ಟ್ರೀಯ ಗೌರವ ಮತ್ತು ದೇಶಭಕ್ತಿಯ ಸಂಕೇತವಾಗಿರುವ ‘ವಂದೇ ಮಾತರಂ’ಗೆ ಕಾನೂನು ರಕ್ಷಣೆ ಒದಗಿಸುವ ಮೂಲಕ ಅದರ ಗೌರವ ಮತ್ತು ಘನತೆಯನ್ನು ಕಾಪಾಡುವ ಉದ್ದೇಶವನ್ನು ತಿದ್ದುಪಡಿ ಕಾಯ್ದೆ ಹೊಂದಿದೆ.