ದರ್ಬೆ ಜನಸೇವಾ ಕೇಂದ್ರ ಗಲಾಟೆ ಪ್ರಕರಣ: 10 ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ಪುತ್ತೂರು ನಗರದ ದರ್ಬೆಯ ಜನಸೇವಾ ಕೇಂದ್ರವೊಂದರಲ್ಲಿ ಗ್ರಾಹಕರು ಹಾಗೂ ಅಂಗಡಿ ಮಾಲಕರ ನಡುವೆ ನಡೆದ ಗಲಾಟೆ ಸಂದರ್ಭ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜನಸೇವಾ ಕೇಂದ್ರದಲ್ಲಿ ಲ್ಯಾಮಿನೇಶನ್ ಮಾಡಲೆಂದು ನೀಡಿದ್ದ ದಾಖಲೆ ಪತ್ರಕ್ಕೆ ಹಾನಿಯಾದ ವಿಚಾರವಾಗಿ ಗ್ರಾಹಕರು ಮತ್ತು ಅಂಗಡಿ ಮಾಲಕರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಗಲಾಟೆಗೆ ತಿರುಗಿತ್ತು. ಈ ವೇಳೆ ಕರ್ತವ್ಯ ನಿರತ ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಲಾಗಿದೆ ಎಂಬ ಆರೋಪದಡಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದಲ್ಲಿ ಆರೋಪಿಗಳಾಗಿರುವ ಅಬ್ದುಲ್ ನಿಯಾಝ್ ಪೆರ್ನೆ (26), ಮುಹಮ್ಮದ್ ನೌಶಾದ್ ತಾರಿಗುಡ್ಡೆ (32), ಆದಂ ಕೋಲ್ಪೆ (45), ಮುಹಮ್ಮದ್ ಸುಹೈಲ್ ಬಿ. ಭಕ್ತಕೋಡಿ (28), ಅಬ್ದುಲ್ ಖಾದರ್ ಜಾಬಿರ್ ಬನ್ನೂರು (30), ಅಬ್ದುಲ್ ಕರೀಂ ಒಳಮೊಗ್ರು ಕುಂಬ್ರ (39), ಯಾಕೂಬ್ ಅಂಗಡಿಮಜಲು (47), ಇಮ್ರಾನ್ ಅಹ್ಮದ್ ಅಲಂಗುರಡ್ಕ (40), ಮುಹಮ್ಮದ್ ರಿಫಾಝ್ ಕೂರ್ನಡ್ಕ (22) ಹಾಗೂ ಮುಹಮ್ಮದ್ ಇರ್ಷಾದ್ ಜೆ. ಜಾರತ್ತಾರ್ (40) ಅವರು ನಿರೀಕ್ಷಣಾ ಜಾಮೀನು ಕೋರಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್ ಅವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ಆರೋಪಿಗಳ ಪರವಾಗಿ ವಕೀಲ ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದ ಮಂಡಿಸಿದರು.