-->
108 ಆ್ಯಂಬುಲೆನ್ಸ್ ನೌಕರರ ಗಡುವು ಮುಕ್ತಾಯ: ಮಂಗಳವಾರ ರಾತ್ರಿಯಿಂದ ಸೇವೆ ಬಂದ್ ಎಚ್ಚರಿಕೆ

108 ಆ್ಯಂಬುಲೆನ್ಸ್ ನೌಕರರ ಗಡುವು ಮುಕ್ತಾಯ: ಮಂಗಳವಾರ ರಾತ್ರಿಯಿಂದ ಸೇವೆ ಬಂದ್ ಎಚ್ಚರಿಕೆ

 


ವಾರ್ಷಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 108 ಆ್ಯಂಬುಲೆನ್ಸ್ ನೌಕರರು ರಾಜ್ಯ ಸರ್ಕಾರಕ್ಕೆ ನೀಡಿದ್ದ 15 ದಿನಗಳ ಗಡುವು ಸೋಮವಾರಕ್ಕೆ ಮುಕ್ತಾಯಗೊಂಡಿದೆ. ಆದರೆ ಗಡುವು ಮುಗಿದರೂ ಆರೋಗ್ಯ ಇಲಾಖೆ ಹಾಗೂ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮತ್ತೊಮ್ಮೆ ಒತ್ತಾಯಿಸಿರುವ ನೌಕರರು, ಮಂಗಳವಾರ ಸಂಜೆಯೊಳಗೆ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ ರಾತ್ರಿ 8 ಗಂಟೆಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸೇವೆಯನ್ನು ಸ್ಥಗಿತಗೊಳಿಸುವುದರ ಜತೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ ಎನ್ನಲಾಗಿದೆ.

108 ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡರೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತುರ್ತು ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಪಘಾತ, ಹೃದಯಾಘಾತ ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ಆ್ಯಂಬುಲೆನ್ಸ್ ಸೇವೆ ಅವಲಂಬಿಸಿರುವ ರೋಗಿಗಳು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗುವ ಆತಂಕ ಎದುರಾಗಿದೆ.

ನೌಕರರ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವ ಮೂಲಕ ಸೇವೆಗೆ ಯಾವುದೇ ಅಡ್ಡಿಯಾಗದಂತೆ ಸರ್ಕಾರ ತುರ್ತು ಮಧ್ಯಪ್ರವೇಶ ಮಾಡಬೇಕು ಎಂದು ಸಿಬ್ಬಂದಿ ಒತ್ತಾಯಿಸಿದ್ದಾರೆ. ಸರ್ಕಾರ ನಾಳೆಯೊಳಗೆ ಬೇಡಿಕೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆಯೇ ಅಥವಾ 108 ಸೇವೆ ಸ್ಥಗಿತಗೊಳ್ಳುತ್ತದೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Ads on article

Advertise in articles 1

advertising articles 2

Advertise under the article