-->
ಬಡಗಬೆಟ್ಟು ಸೊಸೈಟಿಗೆ ರೂ.15.09 ಕೋಟಿ ನಿವ್ವಳ ಲಾಭ: ಶೇ.15 ಡಿವಿಡೆಂಡ್ ಘೋಷಣೆ

ಬಡಗಬೆಟ್ಟು ಸೊಸೈಟಿಗೆ ರೂ.15.09 ಕೋಟಿ ನಿವ್ವಳ ಲಾಭ: ಶೇ.15 ಡಿವಿಡೆಂಡ್ ಘೋಷಣೆ


ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2025-26ನೇ ಸಾಲಿನಲ್ಲಿ ರೂ.15.09 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡುವುದಾಗಿ ಘೋಷಿಸಿದೆ.


ಸೊಸೈಟಿಯ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೆ.13ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಸೊಸೈಟಿ ಅಧ್ಯಕ್ಷ ಸಹಕಾರ ರತ್ನ ಜಯಕರ ಶೆಟ್ಟಿ ಇಂದ್ರಾಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಸೊಸೈಟಿ 22,869 ಸದಸ್ಯರನ್ನು ಹೊಂದಿದ್ದು, ರೂ.4.89 ಕೋಟಿ ಪಾಲು ಬಂಡವಾಳ, ರೂ.658.80 ಕೋಟಿ ಠೇವಣಿ ಹಾಗೂ ರೂ.533.96 ಕೋಟಿ ಹೊರಬಾಕಿ ಸಾಲ ಹೊಂದಿದೆ. 2025-26ನೇ ಸಾಲಿನಲ್ಲಿ ಸುಮಾರು ರೂ.4,089 ಕೋಟಿ ವಾರ್ಷಿಕ ವಹಿವಾಟು ನಡೆಸಿ ರೂ.15.09 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಸೊಸೈಟಿಯ ಸರ್ವತೋಮುಖ ಅಭಿವೃದ್ಧಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ 2025-26ನೇ ಸಾಲಿನ ಸಾಧನಾ ಪ್ರಶಸ್ತಿ ದೊರೆತಿದ್ದು, ಇದು ಸತತ 20ನೇ ಜಿಲ್ಲಾ ಪ್ರಶಸ್ತಿಯಾಗಿದೆ. ಸತತ ಎರಡು ಬಾರಿ ರಾಷ್ಟ್ರಮಟ್ಟದ ಹಾಗೂ ಒಂಬತ್ತು ಬಾರಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಸೊಸೈಟಿ ಪಡೆದುಕೊಂಡಿದೆ.

72ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಸೊಸೈಟಿಗೆ ‘ಸಹಕಾರ ಮಾಣಿಕ್ಯ’ ಪ್ರಶಸ್ತಿ ಲಭಿಸಿದ್ದು, ನಗದು ಬಹುಮಾನ ಹಾಗೂ 5 ಗ್ರಾಂ ಬಂಗಾರದ ಪದಕ ದೊರೆತಿದೆ. ಉಡುಪಿ ಜಿಲ್ಲೆಯ ಮೊದಲ ಕ್ರೆಡಿಟ್ ಸಹಕಾರ ಸಂಘವಾಗಿ ಈ ಪ್ರಶಸ್ತಿಗೆ ಪಾತ್ರವಾಗಿರುವುದು ಹೆಗ್ಗಳಿಕೆಯಾಗಿದೆ.

ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಐವರನ್ನು ಸನ್ಮಾನಿಸಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಫ್ಯಾಷನ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಬಾಲಪ್ರತಿಭೆ ಸಚಿತ ರಾವ್, ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯ ರಾಷ್ಟ್ರೀಯ ವೇದಿಕೆಯಲ್ಲಿ ಉಡುಪಿಯನ್ನು ಪ್ರತಿನಿಧಿಸಿದ ಸ್ಫೂರ್ತಿ ಡಿ. ಶೆಟ್ಟಿ, ಸತತ 25 ಗಂಟೆಗಳ ಕಾಲ 200ಕ್ಕೂ ಅಧಿಕ ದಾಸರ ಪದಗಳನ್ನು ಪ್ರಸ್ತುತಪಡಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಿಶ್ವದಾಖಲೆ ಮಾಡಿದ ವಿದುಷಿ ಸಂಗೀತ ಬಾಲಚಂದ್ರ, ಸ್ವಾವಲಂಬನೆಯ ಮೂಲಕ ಆಹಾರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಸುಗುಣಾ ಪೈ ಟಿ. ಹಾಗೂ ಪವರ್‌ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್‌ನಲ್ಲಿ ವಿವಿಧ ಮಟ್ಟಗಳಲ್ಲಿ ಸಾಧನೆ ಮಾಡಿದ ಆ್ಯನ್ನಿ ಲಿಸಾ ಅಮ್ಮನ್ನ ಅವರನ್ನು ಗೌರವಿಸಲಾಯಿತು.

ಸೊಸೈಟಿಯ ಮಲ್ಪೆ ಶಾಖೆಯಲ್ಲಿ ಸುಮಾರು 11 ವರ್ಷಗಳ ಕಾಲ ದೈನಿಕ ಠೇವಣಿ ಸಂಗ್ರಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗೋವಿಂದಾಸ್ ಕೆ. ಸುವರ್ಣ ಹಾಗೂ ಅಂಬಾಗಿಲು ಶಾಖೆಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ವೆಂಕಟರಮಣ ಭಟ್ ಅವರನ್ನು ಬೀಳ್ಕೊಡಲಾಯಿತು.

ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಸೊಸೈಟಿ ಡಿಜಿಟಲೀಕರಣಕ್ಕೆ ಆದ್ಯತೆ ನೀಡಿದ್ದು, ಸುರಕ್ಷಿತ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸುವ ಉದ್ದೇಶದಿಂದ ಅಗತ್ಯ ಭದ್ರತಾ ಕ್ರಮಗಳೊಂದಿಗೆ ‘ಚೇತನಾ’ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ದೈನಿಕ ಠೇವಣಿ ಸಂಗ್ರಹಣೆಯನ್ನೂ ‘ಪಿಗ್ಮಿ’ ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಸೊಸೈಟಿ ಬ್ಯಾಂಕಿಂಗ್ ವ್ಯವಹಾರಕ್ಕೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಿಗೂ ಆದ್ಯತೆ ನೀಡುತ್ತಿದ್ದು, ಪ್ರತಿವರ್ಷ ಸುಮಾರು ರೂ.30 ಲಕ್ಷವನ್ನು ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಗಿಸುತ್ತಿದೆ. ಸದಸ್ಯರ ಅನುಕೂಲಕ್ಕಾಗಿ ಕ್ಯೂಆರ್ ಕೋಡ್ ಸೌಲಭ್ಯ, ಉಚಿತ ಮಿಸ್ಡ್ ಕಾಲ್ ಹಾಗೂ ಎಸ್‌ಎಂಎಸ್ ಸೇವೆ, ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‌ಫರ್, ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್ ಸೇರಿದಂತೆ ವಿವಿಧ ವಿಮಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಭಾಷೆಯ ಕೊರತೆಯಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯವಹರಿಸಲು ಹಿಂದೇಟು ಹಾಕುತ್ತಿರುವ ಜನರು ಸಹಕಾರಿ ಸಂಸ್ಥೆಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಸ್ಥಳೀಯ ಜನರೊಂದಿಗೆ ಆತ್ಮೀಯವಾಗಿ ಬೆರೆತು, ಅವರ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಇದೇ ಕಾರಣದಿಂದ ಸಹಕಾರಿ ಬ್ಯಾಂಕ್‌ಗಳ ಮೇಲಿನ ಜನರ ವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶತಮಾನ ಕಂಡಿರುವ ಬಡಗುಬೆಟ್ಟು ಸಹಕಾರಿ ಸಂಸ್ಥೆ ತನ್ನ ಸೇವಾ ಕಾರ್ಯವನ್ನು ಮತ್ತಷ್ಟು ವಿಸ್ತರಿಸಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ಆರಂಭಿಸುವ ಮೂಲಕ ಹೆಚ್ಚಿನ ಜನರಿಗೆ ಸಹಕಾರಿ ಸೇವೆ ತಲುಪಿಸುವಂತಾಗಬೇಕು ಎಂದರು. 

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಸಹಕಾರಿ ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಉತ್ತಮ ಮೇಲ್ಪಂಕ್ತಿಯಾಗಿರುವ ಸಂಸ್ಥೆ ಯಾವುದಾದರೂ ಇದ್ದರೆ ಅದು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ. ಸಂಸ್ಥೆಯ ಚುನಾವಣೆಗಳನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿರುವುದು ಕೂಡ ಸೊಸೈಟಿಯ ಸುಲಲಿತ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ. ಎಲ್ಲವೂ ಸರಿಯಾಗಿರುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಸಂಸ್ಥೆಯ ವಿರುದ್ಧ ಅಪಪ್ರಚಾರ ನಡೆಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಆ ರೀತಿಯ ಅಪಪ್ರಚಾರದ ‘ಕಾಯಿಲೆ’ ಬಡಗುಬೆಟ್ಟು ಸೊಸೈಟಿಗೆ ಬಂದಿಲ್ಲ ಎಂದು ಅವರು ಹೇಳಿದರು. ಸದ್ಯ 12 ಶಾಖೆಗಳನ್ನು ಹೊಂದಿರುವ ಬಡಗುಬೆಟ್ಟು ಸೊಸೈಟಿ ಮುಂದಿನ ದಿನಗಳಲ್ಲಿ 100 ಶಾಖೆಗಳನ್ನು ತಲುಪುವಂತಾಗಬೇಕು ಎಂದು ಪ್ರಮೋದ್ ಮಧ್ವರಾಜ್ ಆಶಿಸಿದರು.

ಸೊಸೈಟಿಯ ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಕಾಂಚನ್, ಎಲ್. ಉಮಾನಾಥ, ಪುರುಷೋತ್ತಮ ಪಿ. ಶೆಟ್ಟಿ, ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಿನಯ ಕುಮಾರ್ ಟಿ.ಎ., ಪದ್ಮನಾಭ ಕೆ. ನಾಯಕ್, ಸದಾಶಿವ ನಾಯ್ಕ್, ಮನೋಹರ್ ಎಸ್. ಶೆಟ್ಟಿ, ಸಾಧು ಸಾಲ್ಯಾನ್, ಜಯಾ ಶೆಟ್ಟಿ ಹಾಗೂ ಗಾಯತ್ರಿ ಎಸ್. ಭಟ್ ಉಪಸ್ಥಿತರಿದ್ದರು.

ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ. ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ವಂದಿಸಿದರು

Ads on article

Advertise in articles 1

advertising articles 2

Advertise under the article