ಉಡುಪಿಯಲ್ಲಿ ಪಂಚ ಹಸಿರೆಲೆಯಲ್ಲಿ ಮೂಡಿ ಬಂದ ಗಣಪ
Sunday, September 13, 2026
ಉಡುಪಿಯ ಶ್ರೀ ಗಣೇಶೋತ್ಸವ ಸಮಿತಿ ಭಕ್ತವೃಂದ, ಮಾರುತಿ ವೀಥಿಕದ ವತಿಯಿಂದ ಈ ಬಾರಿ 26ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದ್ದು, ಪರಿಸರ ಸ್ನೇಹಿ ‘ಪಂಚ ಹಸಿರೆಲೆ ಗಣಪ’ ವಿಶೇಷ ಆಕರ್ಷಣೆಯಾಗಿದೆ.
ಮಾವಿನ ಎಲೆ, ವೀಳ್ಯದೆಲೆ, ಎಕ್ಕದ ಎಲೆ, ಬಾಳೆ ಎಲೆ ಹಾಗೂ ಹಲಸಿನ ಎಲೆ ಸೇರಿದಂತೆ ಪೂಜಾ ಕಾರ್ಯಗಳಲ್ಲಿ ಬಳಸುವ ಐದು ಬಗೆಯ ಹಸಿರೆಲೆಗಳನ್ನು ಆಧರಿಸಿ ಈ ವಿಶಿಷ್ಟ ಗಣಪತಿ ವಿಗ್ರಹವನ್ನು ರೂಪಿಸಲಾಗಿದೆ. ಕಿನ್ನಿಮೂಲ್ಕಿಯ ದಿವಂಗತ ಸದಾಶಿವ ಆಚಾರ್ಯ ಅವರ ಪುತ್ರರಾದ ಕಾರ್ತಿಕ್ ಆಚಾರ್ಯ ಹಾಗೂ ಕೌಶಿಕ್ ಆಚಾರ್ಯ ಅವರ ಕೈಚಳಕದಲ್ಲಿ ಪಂಚ ಹಸಿರೆಲೆ ಗಣಪ ಮೂಡಿಬಂದಿದೆ.
ಗುರುರಾಜ್ ಎಂ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಬೆಳಗ್ಗೆ 9.30ಕ್ಕೆ ಪ್ರಾಣ ಪ್ರತಿಷ್ಠೆ, 11.30ಕ್ಕೆ ಗಣಹೋಮ ಹಾಗೂ ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸಂಗೀತ ಭಕ್ತಿರಸಮಂಜರಿ ಕಾರ್ಯಕ್ರಮ ಜರುಗಲಿದೆ. ಸಂಜೆ 6ಕ್ಕೆ ರಂಗಪೂಜೆ ನಡೆಯಲಿದ್ದು, ರಾತ್ರಿ 7.30ಕ್ಕೆ ಗಣಪತಿ ವಿಗ್ರಹದ ಮೆರವಣಿಗೆ ಆರಂಭವಾಗಲಿದೆ.
ಮೆರವಣಿಗೆಯು ಉಡುಪಿಯ ವಿವಿಧ ಭಾಗಗಳಲ್ಲಿ ಸಂಚರಿಸಿ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಗ್ರಹದ ಜಲಸ್ತಂಭನ ನಡೆಯಲಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಸರಳಬೆಟ್ಟು ಗಣೇಶ್ ರಾಜ್ ತಿಳಿಸಿದ್ದಾರೆ.
