-->
 ದ.ಕ.ದಲ್ಲಿ 20 ನಕಲಿ ಕ್ಲಿನಿಕ್‌ಗಳಿಗೆ ಬೀಗ: ರಾಜ್ಯದಾದ್ಯಂತ 582 ನಕಲಿ ಕ್ಲಿನಿಕ್ ಗಳ ವಿರುದ್ಧ ಪ್ರಕರಣ

ದ.ಕ.ದಲ್ಲಿ 20 ನಕಲಿ ಕ್ಲಿನಿಕ್‌ಗಳಿಗೆ ಬೀಗ: ರಾಜ್ಯದಾದ್ಯಂತ 582 ನಕಲಿ ಕ್ಲಿನಿಕ್ ಗಳ ವಿರುದ್ಧ ಪ್ರಕರಣ


ರಾಜ್ಯಾದ್ಯಂತ ನಕಲಿ ವೈದ್ಯರು ಮತ್ತು ಅಕ್ರಮ ಚಿಕಿತ್ಸಾಲಯಗಳ ವಿರುದ್ಧ ಆರೋಗ್ಯ ಇಲಾಖೆ ಬೃಹತ್ ಕಾರ್ಯಾಚರಣೆ ನಡೆಸಿದ್ದು, 2024ರಿಂದ ಇಲ್ಲಿಯವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 582 ನಕಲಿ ಕ್ಲಿನಿಕ್‌ಗಳನ್ನು ಬಂದ್ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 20 ನಕಲಿ ಚಿಕಿತ್ಸಾಲಯಗಳ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ವೈದ್ಯಕೀಯ ಅರ್ಹತೆ ಇಲ್ಲದೆ ಸಾರ್ವಜನಿಕರಿಗೆ ಚಿಕಿತ್ಸೆ ನೀಡುವುದು, ಅನಧಿಕೃತವಾಗಿ ಔಷಧ ವಿತರಿಸುವುದು ಹಾಗೂ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಾಗಿ ಜನರನ್ನು ವಂಚಿಸುತ್ತಿದ್ದ ನಕಲಿ ವೈದ್ಯರ ವಿರುದ್ಧ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಬಂದ ದೂರುಗಳು ಮತ್ತು ಆರೋಗ್ಯ ಇಲಾಖೆಯ ಪರಿಶೀಲನೆಯ ಆಧಾರದ ಮೇಲೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದ್ದ ಚಿಕಿತ್ಸಾಲಯಗಳನ್ನು ಗುರುತಿಸಲಾಗಿದೆ. ಪರಿಶೀಲನೆ ವೇಳೆ ಅಗತ್ಯ ವೈದ್ಯಕೀಯ ಪದವಿ, ನೋಂದಣಿ ಹಾಗೂ ಪರವಾನಗಿ ಇಲ್ಲದೆ ಚಿಕಿತ್ಸೆ ನೀಡುತ್ತಿರುವುದು ಹಲವು ಕಡೆ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಕಲಿ ವೈದ್ಯರ ಹಾವಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದು, ಸಾರ್ವಜನಿಕರು ಅರ್ಹತೆ ಮತ್ತು ನೋಂದಣಿ ಹೊಂದಿರುವ ವೈದ್ಯರಿಂದ ಮಾತ್ರ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದ್ದಾರೆ.

ನಕಲಿ ವೈದ್ಯರ ಚಟುವಟಿಕೆಗಳು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಇಂತಹ ಅಕ್ರಮಗಳ ವಿರುದ್ಧ ಮುಂದೆಯೂ ನಿರಂತರ ಕಾರ್ಯಾಚರಣೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article