ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ 2.10 ಕೋಟಿ ಲಾಭ; ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಣೆ
ಉಡುಪಿ ಕುಕ್ಕಿಕಟ್ಟೆಯ ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ.20ರಂದು ಅಲೆವೂರು ಶಾಖೆಯ ‘ಸಮೃದ್ಧಿ’ ಸಭಾಭವನದಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯಲಕ್ಷ್ಮಿ ಮಾರ್ಪಳ್ಳಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು. ಸದಸ್ಯರಿಗೆ ಶೇ.18ರಷ್ಟು ಡಿವಿಡೆಂಡ್ ಪಾವತಿಸಲು ಸಭೆಯಲ್ಲಿ ಮಂಜೂರಾತಿ ನೀಡಲಾಯಿತು.
ಸಂಘದ ಅಧ್ಯಕ್ಷ ಶ್ರೀಧರ ದೇವಾಡಿಗ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, ವರದಿ ವರ್ಷದಲ್ಲಿ ಸಂಘವು ರೂ.2,10,72,366.46 ಲಾಭ ಗಳಿಸಿದೆ. ಸದಸ್ಯರಿಂದ ರೂ.131.82 ಕೋಟಿ ಠೇವಣಿ ಸಂಗ್ರಹವಾಗಿದ್ದು, ರೂ.88.67 ಕೋಟಿ ಸಾಲ ಹೊರಬಾಕಿಯಿದೆ. ಸಂಘದ ಒಟ್ಟು ವ್ಯವಹಾರವು ರೂ.500 ಕೋಟಿಗೂ ಮೀರಿದ್ದು, ದುಡಿಯುವ ಬಂಡವಾಳ ರೂ.145.67 ಕೋಟಿ ಇದೆ ಎಂದು ತಿಳಿಸಿದರು.
ಸಂಘದ ಐದು ಶಾಖೆಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ಬೇಡಿಕೆಗೆ ಸ್ಪಂದಿಸಿ ವಿವಿಧ ಸೇವೆಗಳನ್ನು ಒದಗಿಸುತ್ತಿವೆ. ಮುಂದಿನ ಆರ್ಥಿಕ ವರ್ಷದಲ್ಲಿ ರೂ.150 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಸದಸ್ಯರು ಹೆಚ್ಚಿನ ವ್ಯವಹಾರ ನಡೆಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಅಲೆವೂರು ಶಾಖೆಯ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಹಾಗೂ ಮೂರನೇ ಮಹಡಿಯಲ್ಲಿ ವಿಶಾಲ ಸಭಾಂಗಣ ನಿರ್ಮಾಣದ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ನಿರ್ದೇಶಕರಾದ ಸದಾನಂದ ಶೆಟ್ಟಿ, ವಿಜಯ ಪಾಲನ್, ರಮಾನಂದ ನಾಯಕ್, ವಿಜಯ ಪೂಜಾರಿ, ಐತಪ್ಪ ಆರ್. ಅಮಿನ್, ಜಯಕರ ಪೂಜಾರಿ, ದಿನೇಶ್ ಸಿ. ನಾಯ್ಕ್, ಕೇಶವ, ರಮಾದೇವಿ, ಲಕ್ಷ್ಮೀ, ವೃತ್ತಿಪರ ನಿರ್ದೇಶಕರಾದ ಸದಾನಂದ ಕಾಂಚನ್, ಸತೀಶ್ ಪೂಜಾರಿ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ದಿನೇಶ್ ಎ. ಕಿಣಿ ಸ್ವಾಗತಿಸಿ, ನಿರ್ದೇಶಕ ಅಶೋಕ್ ಕುಮಾರ್ ವಂದಿಸಿದರು. ಸಿಬ್ಬಂದಿ ಗಿರೀಶ್ ಐತಾಳ್ ಕಾರ್ಯಕ್ರಮ ನಿರೂಪಿಸಿದರು.
