-->
ಆಸ್ಪತ್ರೆ ಕಟ್ಟಬೇಕಿದ್ದ ಜಾಗವೀಗ ಕೃತಕ ಕೆರೆ: 5 ವರ್ಷಗಳಿಂದ ಬಲಿಗಾಗಿ ಕಾಯುತ್ತಿದೆ ’ಮರಣಕೂಪ’

ಆಸ್ಪತ್ರೆ ಕಟ್ಟಬೇಕಿದ್ದ ಜಾಗವೀಗ ಕೃತಕ ಕೆರೆ: 5 ವರ್ಷಗಳಿಂದ ಬಲಿಗಾಗಿ ಕಾಯುತ್ತಿದೆ ’ಮರಣಕೂಪ’


ಒಂದೆಡೆ ರೋಗಿಗಳಿಗೆ ಚಿಕಿತ್ಸೆ ನೀಡುವ ಸರ್ಕಾರಿ ಆಸ್ಪತ್ರೆ... ಮತ್ತೊಂದೆಡೆ ಅದೇ ಆಸ್ಪತ್ರೆಯ ಮುಂಭಾಗದಲ್ಲೇ ವರ್ಷಗಳಿಂದ ಬತ್ತದೆ ನಿಂತಿರುವ ಬೃಹತ್ ಹೊಂಡ! ಮಳೆಗಾಲದಲ್ಲಿ ಕೆರೆಯಂತಾಗುವ ಈ ಹೊಂಡ ಇದೀಗ ಬೇಸಿಗೆಯಲ್ಲೂ ನೀರು ಹಿಡಿದಿಟ್ಟುಕೊಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಅಪೂರ್ಣ ಆಸ್ಪತ್ರೆ ಕಾಮಗಾರಿಯ ಬೃಹತ್ ಹೊಂಡವೇ ಈ ಅವ್ಯವಸ್ಥೆಯ ಕೇಂದ್ರಬಿಂದು. ಸುಮಾರು 1.39 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಬೃಹತ್ ಹೊಂಡ ಕಳೆದ ಐದು ವರ್ಷಗಳಿಂದಲೂ ಸ್ಥಳೀಯರ ಪಾಲಿಗೆ ಆತಂಕದ ತಾಣವಾಗಿ ಪರಿಣಮಿಸಿದೆ.


ಸರ್ಕಾರ ಹಾಗೂ ಬಿ.ಆರ್. ಶೆಟ್ಟಿ ವೆಂಚರ್ಸ್ ನಡುವಿನ ಸಾರ್ವಜನಿಕ–ಖಾಸಗಿ ಸಹಭಾಗಿತ್ವ  ಒಪ್ಪಂದದಡಿ ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಇಲ್ಲಿ ಬೃಹತ್ ಪ್ರಮಾಣದಲ್ಲಿ ಭೂಮಿಯನ್ನು ಅಗೆದು ಕಂದಕ ನಿರ್ಮಿಸಲಾಗಿತ್ತು .2017ರಲ್ಲಿ ಸರ್ಕಾರಿ ಮಹಿಳಾ ಆಸ್ಪತ್ರೆಯ ಜಾಗವನ್ನು ಬಿಆರ್‌ಎಸ್ ಲೈಫ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಹಳೆಯ ಆಸ್ಪತ್ರೆ ಜಾಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ, ಅದರ ಲಾಭಾಂಶದ ಮೂಲಕ ಬಿಆರ್‌ಎಸ್ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ವಹಿಸುವ ಉದ್ದೇಶದ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಆದರೆ ಬಿಆರ್‌ಎಸ್ ಸಂಸ್ಥೆ ಮೂರು ನೆಲಮಾಳಿಗೆ ಅಂತಸ್ತುಗಳ ನಿರ್ಮಾಣಕ್ಕೆ ಮುಂದಾದ ಹಿನ್ನೆಲೆಯಲ್ಲಿ, ಜಾಗದ ನಿಯಮಾನುಸಾರ ನಗರಾಭಿವೃದ್ಧಿ ಪ್ರಾಧಿಕಾರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿತು ಎನ್ನಲಾಗಿದೆ. ಪರಿಣಾಮವಾಗಿ ಯೋಜನೆ ಸ್ಥಗಿತಗೊಂಡಿತು. 

ಸುಮಾರು 7.5 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಕಾಮಗಾರಿ 2020ರಿಂದ ಸ್ಥಗಿತಗೊಂಡಿದ್ದು, ನೆಲಮಹಡಿ ನಿರ್ಮಾಣಕ್ಕಾಗಿ ಅಗೆದಿದ್ದ ಬೃಹತ್ ಗುಂಡಿ ಹಾಗೆಯೇ ಉಳಿಯಿತು. ನಿರ್ಮಾಣವಾಗಬೇಕಿದ್ದ ಕಟ್ಟಡದ ಬದಲಿಗೆ, ಅಗೆದ ಬೃಹತ್ ಹೊಂಡ ಮಾತ್ರ ವರ್ಷಗಳಿಂದ ಹಾಗೆಯೇ ಉಳಿದಿದೆ.

ಮಳೆ ಬಂದಾಗ ನೀರು ತುಂಬಿಕೊಳ್ಳುವ ಈ ಹೊಂಡ ಕ್ರಮೇಣ ಬೃಹತ್ ಕೃತಕ ಕೆರೆಯ ಸ್ವರೂಪ ಪಡೆಯುತ್ತಿದೆ. ಮಳೆಗಾಲ ಮುಗಿದ ಬಳಿಕವೂ ನೀರು ಸಂಪೂರ್ಣವಾಗಿ ಇಂಗದೆ ಉಳಿಯುತ್ತಿರುವುದು ಸಮಸ್ಯೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ನಿಂತ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕ ವಾತಾವರಣ ಸೃಷ್ಟಿಸುತ್ತಿದ್ದು, ಡೆಂಗ್ಯೂ, ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಆತಂಕ ಎದುರಾಗಿದೆ. ಈಗಾಗಲೇ ರೋಗಿಗಳ ಚಿಕಿತ್ಸೆ ನಡೆಯುತ್ತಿರುವ ಆಸ್ಪತ್ರೆಯ ಮುಂಭಾಗದಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗಂಭೀರ ಪ್ರಶ್ನೆ ಎಬ್ಬಿಸಿದೆ. 

ಸ್ಥಳೀಯರಾದ ಭರತ್ ಮಾತನಾಡಿ, “ಈ ಸಮಸ್ಯೆ ಕುರಿತು ಸ್ಥಳೀಯರೆಲ್ಲರೂ ಸೇರಿ ಈ ಹಿಂದೆ ಉಡುಪಿ ನಗರಸಭೆಗೆ ಮನವಿ ಸಲ್ಲಿಸಿದ್ದೇವೆ. ಸಮಸ್ಯೆಯ ಗಂಭೀರತೆಯನ್ನು ಅರಿತು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರೂ, ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಸಮಸ್ಯೆ ಬಗೆಹರಿಸುವ ಗೋಜಿಗೆ ಯಾರೂ ಮುಂದಾಗುತ್ತಿಲ್ಲ. ಸಮಸ್ಯೆ ಇನ್ನಷ್ಟು ಗಂಭೀರತೆ ಪಡೆದುಕೊಳ್ಳುವ ಮೊದಲು ಸೂಕ್ತ ಕ್ರಮಕೈಗೊಳ್ಳಬೇಕು ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕೃತಕ ಕೆರೆಯ ಪೂರ್ವ ಮತ್ತು ಉತ್ತರ ಭಾಗದಲ್ಲಿ ಬಹುಮಹಡಿ ಕಟ್ಟಡಗಳಿವೆ. ಗುಂಡಿಯ ಸುತ್ತಲೂ ಮಣ್ಣು ಕುಸಿಯದಂತೆ ಸೂಕ್ತ ತಡೆಗೋಡೆ ನಿರ್ಮಿಸದಿರುವುದು ಮತ್ತೊಂದು ಆತಂಕಕಾರಿ ಅಂಶ. ಆರೋಗ್ಯ ಇಲಾಖೆಯ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ಅಪಾಯವಿಲ್ಲ ಎಂಬ ವರದಿ ನೀಡಿದ್ದಾರೆ ಎನ್ನಲಾಗಿದ್ದರೂ, ಸ್ಥಳದಲ್ಲಿನ ಪರಿಸ್ಥಿತಿ ಮಾತ್ರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೇಡಿ ಮಣ್ಣು ಮೆದುವಾಗಿರುವ ಹಿನ್ನೆಲೆಯಲ್ಲಿ ಮಣ್ಣು ಕುಸಿಯುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ. 

ಐದು ವರ್ಷಗಳಿಂದ ಸಮಸ್ಯೆ ಮುಂದುವರಿದಿದ್ದರೂ, ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದ ಈ ವಿಚಾರಕ್ಕೆ ಇನ್ನೂ ಶಾಶ್ವತ ಪರಿಹಾರ ದೊರೆತಿಲ್ಲ. ಸರ್ಕಾರ, ಆರೋಗ್ಯ ಇಲಾಖೆ, ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹ ಮತ್ತೊಮ್ಮೆ ಬಲವಾಗುತ್ತಿದೆ. 


Ads on article

Advertise in articles 1

advertising articles 2

Advertise under the article