-->
 ಒಂದು ವರ್ಷ ಪೂರೈಸಿದ ಮಣಿಪಾಲ ಹಾಸ್ಪೈಸ್: 694 ರೋಗಿಗಳಿಗೆ ಉಚಿತ ಆರೈಕೆ

ಒಂದು ವರ್ಷ ಪೂರೈಸಿದ ಮಣಿಪಾಲ ಹಾಸ್ಪೈಸ್: 694 ರೋಗಿಗಳಿಗೆ ಉಚಿತ ಆರೈಕೆ


ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ (MAHE)ನ ಅಂಗ ಘಟಕವಾದ ಮಣಿಪಾಲ ಹಾಸ್ಪೈಸ್ ಆ್ಯಂಡ್ ರೆಸ್ಪೈಟ್ ಸೆಂಟರ್‌ (MHRC) ಒಂದು ವರ್ಷದ ರೋಗಿ ಆರೈಕೆ ಸೇವೆಯನ್ನು ಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ 694 ರೋಗಿಗಳಿಗೆ ಹಾಗೂ 1,300ಕ್ಕೂ ಹೆಚ್ಚು ಕುಟುಂಬದ ಆರೈಕೆದಾರರಿಗೆ ಸಂಪೂರ್ಣ ಉಚಿತವಾಗಿ ಬೆಂಬಲ ಮತ್ತು ಆರೈಕೆ ಒದಗಿಸಿದೆ.


ವೈದ್ಯಕೀಯ ಕಾಲೇಜು ಹಾಗೂ ತೃತೀಯ ಹಂತದ ಆಸ್ಪತ್ರೆಯೊಂದಿಗೆ ಸಂಯೋಜಿತವಾಗಿರುವ ದೇಶದ ಏಕೈಕ ಹಾಸ್ಪೈಸ್ ಕೇಂದ್ರವೆಂಬ ಹೆಗ್ಗಳಿಕೆ ಹೊಂದಿರುವ MHRC, 2025ರ ಸೆಪ್ಟೆಂಬರ್ 1ರಂದು 15 ಹಾಸಿಗೆಗಳೊಂದಿಗೆ ರೋಗಿ ಆರೈಕೆ ಆರಂಭಿಸಿತ್ತು. ಇದೀಗ ಒಂದು ವರ್ಷದ ಅವಧಿಯಲ್ಲಿ 40 ಹಾಸಿಗೆಗಳಿಗೆ ವಿಸ್ತರಿಸಿದ್ದು, ಮುಂದಿನ ಹಂತದಲ್ಲಿ 100 ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.


ಗುಣಪಡಿಸಲಾಗದ ಅಥವಾ ಜೀವಿತಾವಧಿಯನ್ನು ಸೀಮಿತಗೊಳಿಸುವ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬಗಳಿಗೆ ಸಾಂತ್ವನ, ಆರೈಕೆ ಮತ್ತು ಬೆಂಬಲ ಒದಗಿಸುವ ಉದ್ದೇಶದಿಂದ MHRC ಸ್ಥಾಪಿಸಲಾಗಿದೆ. ಮುಂದುವರಿದ ಕ್ಯಾನ್ಸರ್, ಪಾರ್ಶ್ವವಾಯು, ಮೋಟಾರ್ ನ್ಯೂರಾನ್ ಕಾಯಿಲೆ, ಪ್ರಗತಿಶೀಲ ನರವೈಜ್ಞಾನಿಕ ಕಾಯಿಲೆಗಳು, ಮುಂದುವರಿದ ಹೃದ್ರೋಗ, ದೀರ್ಘಕಾಲೀನ ಶ್ವಾಸಕೋಶದ ಕಾಯಿಲೆ ಹಾಗೂ ಮುಂದುವರಿದ ಮೂತ್ರಪಿಂಡ ಮತ್ತು ಯಕೃತ್ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇಲ್ಲಿ ಆರೈಕೆ ನೀಡಲಾಗುತ್ತದೆ.

ನೋವು, ಉಸಿರಾಟದ ತೊಂದರೆ ಸೇರಿದಂತೆ ಕಠಿಣ ಲಕ್ಷಣಗಳ ನಿಯಂತ್ರಣ, ಜೀವನದ ಅಂತ್ಯದ ಆರೈಕೆ, ಹಾಸ್ಪೈಸ್ ಆರೈಕೆ, ರೆಸ್ಪೈಟ್ ಹಾಗೂ ಪುನರ್ವಸತಿ ಆರೈಕೆಯ ಅಗತ್ಯವಿರುವ ರೋಗಿಗಳನ್ನು ಕೇಂದ್ರಕ್ಕೆ ದಾಖಲಿಸಿಕೊಳ್ಳಲಾಗುತ್ತದೆ.

MHRCಯಲ್ಲಿ 24 ಗಂಟೆಗಳ ಕಾಲ ಬಹುಶಿಸ್ತೀಯ ತಜ್ಞರ ತಂಡದಿಂದ ಸಮಗ್ರ ಉಪಶಮನ ಆರೈಕೆ ಒದಗಿಸಲಾಗುತ್ತಿದೆ. ಉಪಶಮನ ಆರೈಕೆಯಲ್ಲಿ ಪರಿಣತಿ ಹೊಂದಿರುವ ವೈದ್ಯರು, ದಾದಿಯರು, ಕೌನ್ಸೆಲರ್‌ಗಳು, ಫಿಸಿಯೋಥೆರಪಿಸ್ಟ್‌ಗಳು, ಆಕ್ಯುಪೇಷನಲ್ ಥೆರಪಿಸ್ಟ್‌ಗಳು, ಸಮಾಜ ಕಾರ್ಯಕರ್ತರು, ಆಧ್ಯಾತ್ಮಿಕ ಆರೈಕೆ ಸೇವೆ ಒದಗಿಸುವವರು ಹಾಗೂ ತರಬೇತಿ ಪಡೆದ ಸ್ವಯಂಸೇವಕರು ತಂಡದಲ್ಲಿದ್ದಾರೆ. ರೋಗಿಗಳ ದೈಹಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ಗುರುತಿಸಿ ಸೂಕ್ತ ಆರೈಕೆ ಮತ್ತು ಬೆಂಬಲ ನೀಡಲಾಗುತ್ತಿದೆ.

ಕುಟುಂಬದ ಸದಸ್ಯರನ್ನೂ ಆರೈಕೆಯ ಪ್ರಮುಖ ಭಾಗವಾಗಿ ಪರಿಗಣಿಸಲಾಗಿದ್ದು, ರೋಗದ ಅವಧಿಯಲ್ಲಿ ಸಮಾಲೋಚನೆ, ಪ್ರಾಯೋಗಿಕ ಮಾರ್ಗದರ್ಶನ ಮತ್ತು ಭಾವನಾತ್ಮಕ ಬೆಂಬಲ ನೀಡಲಾಗುತ್ತದೆ. ರೋಗಿಯನ್ನು ಕಳೆದುಕೊಂಡ ಬಳಿಕವೂ ದುಃಖ ನಿರ್ವಹಣೆ ಹಾಗೂ ಶೋಕಪರಿಹಾರ ಆರೈಕೆ ಮೂಲಕ ಕುಟುಂಬಕ್ಕೆ ಅಗತ್ಯ ಬೆಂಬಲ ಮುಂದುವರಿಯುತ್ತದೆ.

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಸುಮಾರು 4.4 ಕಿ.ಮೀ. ದೂರದಲ್ಲಿರುವ 12 ಎಕರೆ ಪ್ರದೇಶದಲ್ಲಿ MHRC ನಿರ್ಮಿಸಲಾಗಿದೆ. ನೈಸರ್ಗಿಕ ಬೆಳಕು, ಶುದ್ಧ ಗಾಳಿ, ಹಸಿರು ಪರಿಸರ ಹಾಗೂ ತೆರೆದ ಅಂಗಳಗಳೊಂದಿಗೆ ಶಾಂತ ವಾತಾವರಣ ಕಲ್ಪಿಸಲಾಗಿದೆ. ಗಾಲಿಕುರ್ಚಿ, ನಡೆದಾಡುವ ಸಾಧನಗಳು ಹಾಗೂ ಆಸ್ಪತ್ರೆ ಹಾಸಿಗೆಗಳ ಸುಲಭ ಸಂಚಾರಕ್ಕೆ ಅನುಕೂಲವಾಗುವಂತೆ ವಿಶಾಲ ಕಾರಿಡಾರ್‌ಗಳನ್ನು ಹೊಂದಿರುವ ಅಡೆತಡೆಮುಕ್ತ ಆವರಣವನ್ನು ನಿರ್ಮಿಸಲಾಗಿದೆ.

ಗಂಭೀರ ಕಾಯಿಲೆಯ ನಡುವೆಯೂ ಜೀವನದ ಸಂತೋಷವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಹಬ್ಬಗಳು, ಜನ್ಮದಿನಗಳು, ವಾರ್ಷಿಕೋತ್ಸವಗಳು ಸೇರಿದಂತೆ ವಿವಿಧ ಕುಟುಂಬದ ಸಂದರ್ಭಗಳನ್ನು ರೋಗಿಗಳು ಹಾಗೂ ಅವರ ಪ್ರೀತಿಪಾತ್ರರೊಂದಿಗೆ ಕೇಂದ್ರದಲ್ಲಿ ಆಚರಿಸಲಾಗುತ್ತಿದೆ.

MHRC ನಿರ್ದೇಶಕಿ ಹಾಗೂ ಉಪಶಮನ ಆರೈಕೆ ತಜ್ಞೆ ಡಾ. ಸೀಮಾ ಆರ್. ರಾವ್ ಮಾತನಾಡಿ, “ಉಪಶಮನ ಆರೈಕೆಯನ್ನು ಸಾಮಾನ್ಯವಾಗಿ ಕಾಯಿಲೆಯ ಅಂತಿಮ ಹಂತದ ಆರೈಕೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ. ವಾಸ್ತವದಲ್ಲಿ ಯಾವುದೇ ರೋಗಿಯು ಗಂಭೀರ ಕಾಯಿಲೆಯನ್ನು ನೋವು, ಭಯ ಅಥವಾ ಏಕಾಂಗಿತನದಲ್ಲಿ ಎದುರಿಸದಂತೆ ನೋಡಿಕೊಳ್ಳುವುದೇ ಇದರ ಉದ್ದೇಶ. ಕಾಯಿಲೆಯ ಯಾವುದೇ ಹಂತದಲ್ಲಿ ಈ ಆರೈಕೆ ನೀಡಬಹುದು. ಮೊದಲ ವರ್ಷದಲ್ಲಿ 694 ರೋಗಿಗಳು ಮತ್ತು ಅವರ ಕುಟುಂಬಗಳು ನಮಗೆ ಹಲವು ಪಾಠ ಕಲಿಸಿವೆ. ಜೀವನಕ್ಕೆ ದಿನಗಳನ್ನು ಸೇರಿಸಲಾಗದಿದ್ದರೂ, ಪ್ರತಿ ದಿನಕ್ಕೂ ಸಾಂತ್ವನ, ಅರ್ಥ ಮತ್ತು ಘನತೆಯನ್ನು ಸೇರಿಸಬಹುದು. ಈ ಆರೈಕೆಯನ್ನು ಎಲ್ಲರಿಗೂ ಸಂಪೂರ್ಣ ಉಚಿತವಾಗಿ ನೀಡಿರುವುದು ನಮ್ಮ ದಾನವಲ್ಲ; ಅದು MHRCಯ ಮೂಲತತ್ವ” ಎಂದರು.

MHRC ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ. ನವೀನ್ ಸಾಲಿನ್ಸ್ ಮಾತನಾಡಿ, “ಹಾಸ್ಪೈಸ್ ಆರೈಕೆ ಜೀವನದ ಅಂತಿಮ ದಿನಗಳಿಗೆ ಮಾತ್ರ ಸೀಮಿತವಲ್ಲ. ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಸೌಕರ್ಯದಿಂದ ಮತ್ತು ಅರ್ಥಪೂರ್ಣವಾಗಿ ಬದುಕಲು ಸಹಾಯ ಮಾಡುವುದರ ಜೊತೆಗೆ, ಆರೈಕೆಯ ಬಹುಪಾಲು ಜವಾಬ್ದಾರಿ ಹೊರುವ ಕುಟುಂಬಗಳಿಗೆ ಬೆಂಬಲ ನೀಡುವುದು ಇದರ ಉದ್ದೇಶ. ರೋಗಿಗಳು ಮತ್ತು ಕುಟುಂಬಗಳಿಗೆ ಅಗತ್ಯವಿರುವ ಸಂದರ್ಭದಲ್ಲಿ ಸೂಕ್ತ ಆರೈಕೆ ದೊರೆಯುವಂತೆ MHRC ವಿಶೇಷ ಉಪಶಮನ, ವಿಶ್ರಾಂತಿ ಹಾಗೂ ಜೀವನದ ಅಂತ್ಯದ ಆರೈಕೆಯನ್ನು ಒಟ್ಟಿಗೆ ತರುತ್ತಿದೆ” ಎಂದರು.

MAHE ಕುಲಪತಿ ಡಾ. ಶರತ್ ಕುಮಾರ್ ರಾವ್ ಕೆ. ಮಾತನಾಡಿ, “ಗುಣಪಡಿಸುವುದು ಸಾಧ್ಯವಿಲ್ಲದ ಸಂದರ್ಭದಲ್ಲೂ ಸಂಸ್ಥೆ ತೋರುವ ಕರುಣೆಯೇ ಅದರ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಪ್ರತಿ ಕುಟುಂಬಕ್ಕೂ ಉಚಿತವಾಗಿ ಬಾಗಿಲು ತೆರೆದಿಟ್ಟು, ಒಂದೇ ವರ್ಷದಲ್ಲಿ 15ರಿಂದ 40 ಹಾಸಿಗೆಗಳಿಗೆ ವಿಸ್ತರಿಸಲು ಸಾಧ್ಯವಾಗಿರುವುದು ಉದಾರ ದಾನಿಗಳು ಮತ್ತು ಹಿತೈಷಿಗಳ ಸಹಕಾರದಿಂದ. ಈ ಸೇವೆ ಯಾವುದೇ ಶುಲ್ಕವಿಲ್ಲದೆ ರೋಗಿಗಳಿಗೆ ತಲುಪುವಂತೆ ಮಾಡಿದ ಹರೀಶ್ ಆ್ಯಂಡ್ ಬೀನಾ ಷಾ ಫೌಂಡೇಶನ್‌ನ ಅಧ್ಯಕ್ಷ ಹರೀಶ್ ಷಾ ಸೇರಿದಂತೆ ಎಲ್ಲ ದಾನಿಗಳು, ಹಿತೈಷಿಗಳು ಮತ್ತು ಕಾರ್ಪೊರೇಟ್ ಪಾಲುದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು.

ಎರಡನೇ ವರ್ಷಕ್ಕೆ ಕಾಲಿಡುತ್ತಿರುವ MHRC, ಹಾಸ್ಪೈಸ್, ರೆಸ್ಪೈಟ್, ಪುನರ್ವಸತಿ, ಕುಟುಂಬ ಆರೈಕೆ ಹಾಗೂ ದುಃಖ ಶಮನ ಆರೈಕೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ಹಂತ ಹಂತವಾಗಿ ತನ್ನ ಸಾಮರ್ಥ್ಯವನ್ನು ವಿಸ್ತರಿಸಲು ಯೋಜಿಸಿದೆ. ಗುಣಪಡಿಸುವಿಕೆ ಸಾಧ್ಯವಾಗದ ಸಂದರ್ಭದಲ್ಲೂ ಸಂಕಟ ನಿವಾರಣೆ, ಕುಟುಂಬಗಳಿಗೆ ಬೆಂಬಲ, ಜೀವನದ ಸಂಭ್ರಮ ಹಾಗೂ ರೋಗಿಯ ಘನತೆಯನ್ನು ಕಾಪಾಡುವ ಸೇವೆಯನ್ನು ಮುಂದುವರಿಸುವ ಸಂಕಲ್ಪವನ್ನು ಕೇಂದ್ರ ಹೊಂದಿದೆ.

Ads on article

Advertise in articles 1

advertising articles 2

Advertise under the article