-->
 ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಳಕ್ಕೆ ಒತ್ತಾಯ: 3 ದಿನ ಗಡುವು ನೀಡಿದ ಒಕ್ಕೂಟ

ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಳಕ್ಕೆ ಒತ್ತಾಯ: 3 ದಿನ ಗಡುವು ನೀಡಿದ ಒಕ್ಕೂಟ


ಹಾಲು ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಹಾಲಿನ ಇಳುವರಿ ಕುಸಿತದ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಿಸುವಂತೆ ರಾಜ್ಯದ 16 ಹಾಲು ಒಕ್ಕೂಟಗಳು ಸರ್ಕಾರವನ್ನು ಒತ್ತಾಯಿಸಿವೆ.

ಮೆಕ್ಕೆಜೋಳ, ಬೂಸಾ, ಕಾಕಂಬಿ ಸೇರಿದಂತೆ ಪಶು ಆಹಾರದ ಕಚ್ಚಾ ವಸ್ತುಗಳ ಬೆಲೆ ಸುಮಾರು ಶೇ.25ರಷ್ಟು ಏರಿಕೆಯಾಗಿದ್ದು, ಹಸಿರು ಮೇವಿನ ಕೊರತೆ, ಇಂಧನ ಹಾಗೂ ಸಾರಿಗೆ ವೆಚ್ಚ ಹೆಚ್ಚಳದಿಂದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಒಕ್ಕೂಟಗಳ ಮುಖಂಡರು ತಿಳಿಸಿದ್ದಾರೆ. ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನವನ್ನೂ ಹೆಚ್ಚಿಸುವಂತೆ ಅವರು ಆಗ್ರಹಿಸಿದ್ದಾರೆ.

ಕೆಎಂಎಫ್ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಈ ಹಿಂದೆ ಪ್ರತಿದಿನ ಸುಮಾರು 1.11 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಇದೀಗ ಉತ್ಪಾದನೆ 1.05ರಿಂದ 1.06 ಕೋಟಿ ಲೀಟರ್‌ಗೆ ಇಳಿಕೆಯಾಗಿದೆ.

ಕಳೆದ ಎಂಟು ತಿಂಗಳಿಂದ ಸರ್ಕಾರದೊಂದಿಗೆ ದರ ಏರಿಕೆ ಕುರಿತು ಚರ್ಚೆ ನಡೆಸಲಾಗುತ್ತಿದ್ದರೂ ಯಾವುದೇ ನಿರ್ಧಾರವಾಗಿಲ್ಲ ಎಂದು ಬಮುಲ್ ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ. ಮೂರು ದಿನಗಳೊಳಗೆ ಸಚಿವ ಸಂಪುಟ ಸಭೆ ಕರೆದು ಲೀಟರ್‌ಗೆ  8 ರೂ. ದರ ಏರಿಕೆ ಕುರಿತು ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯದ ಹಾಲು ಉತ್ಪಾದಕರು ವಿಧಾನಸೌಧ ಚಲೋ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article