ಕರಾವಳಿಯ ‘ಮಿಥ್ಯ’–‘ಇಂಬು’ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ ಗುಜರಾತ್‌ನ ಏಕ್ತಾ ನಗರದಲ್ಲಿ ನಡೆಯಿತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿವಿಧ ವಿಭಾಗಗಳಲ್ಲಿ ಒಟ್ಟು 92 ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಕನ್ನಡ ಹಾಗೂ ತುಳು ಚಿತ್ರರಂಗದ ಹಲವು ಪ್ರತಿಭೆಗಳನ್ನು ರಾಷ್ಟ್ರಪತಿಗಳ ಸಮ್ಮುಖದಲ್ಲಿ ಗೌರವಿಸಲಾಯಿತು.
ಜನಪ್ರಿಯ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಒಡೆತನದ ‘ಪರಂವಃ ಪಿಕ್ಚರ್ಸ್’ ಹಾಗೂ ‘ಕೆಆರ್‌ಜಿ ಸ್ಟುಡಿಯೋಸ್’ ಜಂಟಿ ನಿರ್ಮಾಣದ ‘ಮಿಥ್ಯ’ ಚಿತ್ರವು ಮೂರು ಪ್ರಮುಖ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿತು.
ಸುಮಂತ್ ಭಟ್ ಕಥೆ ಬರೆದು ನಿರ್ದೇಶಿಸಿರುವ ‘ಮಿಥ್ಯ’ ಚಿತ್ರದಲ್ಲಿನ ಅಭಿನಯಕ್ಕಾಗಿ ಬಾಲನಟ ಅತೀಶ್ ಎಸ್. ಶೆಟ್ಟಿ ‘ಅತ್ಯುತ್ತಮ ಬಾಲ ಕಲಾವಿದ’ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ಚಿತ್ರದ ಭಾವಪೂರ್ಣ ಅಭಿನಯಕ್ಕಾಗಿ ರೂಪಶ್ರೀ ವರ್ಕಾಡಿ ಅವರು ‘ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ’ ಪ್ರಶಸ್ತಿಗೆ ಭಾಜನರಾದರು. ಚಿತ್ರದಲ್ಲಿ ಪ್ರಕಾಶ್ ತೂಮಿನಾಡ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕರಾವಳಿಯ ತುಳು ಚಿತ್ರರಂಗಕ್ಕೂ ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ವಿಶೇಷ ಗೌರವ ದೊರೆಯಿತು. ಶಿವಧ್ವಜ್ ಶೆಟ್ಟಿ ನಿರ್ದೇಶನದ ಹಾಗೂ ‘ಪಿಚ್ಚರ್ ಸ್ಟುಡಿಯೋ’ ನಿರ್ಮಾಣದ ‘ಇಂಬು’ ಚಿತ್ರವು ‘ಅತ್ಯುತ್ತಮ ತುಳು ಸಿನಿಮಾ’ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸಿನಿಮಾ ಬರವಣಿಗೆ ವಿಭಾಗದ ‘ಅತ್ಯುತ್ತಮ ಪುಸ್ತಕ’ ಪ್ರಶಸ್ತಿಯು ಲೇಖಕ ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ಅವರ ‘ನಾನಿರುವುದೇ ನಿಮಗಾಗಿ, ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಕೃತಿಗೆ ಲಭಿಸಿದೆ. ಮಿರರ್ ಬುಕ್ಸ್ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.