ಕರಾವಳಿಯ ಕಥೆ.. ಹೊಸ ನಿರೂಪಣೆ: ನವೆಂಬರ್‌ನಲ್ಲಿ ಸೂಚನ್ ಶೆಟ್ಟಿ ನಿರ್ದೇಶನದ ‘ಗಾಡ್ ಪ್ರಾಮಿಸ್’
ಕರಾವಳಿಯ ನೆಲ, ಇಲ್ಲಿನ ಬದುಕು, ಸಂಸ್ಕೃತಿ ಹಾಗೂ ಮಣ್ಣಿನ ಸೊಗಡಿನ ಕಥೆಗಳತ್ತ ಕನ್ನಡ ಚಿತ್ರರಂಗದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇದೀಗ ಇದೇ ಕರಾವಳಿಯ ಮಣ್ಣಿನಿಂದ ಮತ್ತೊಂದು ಹೊಸ ಕಥೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಅದೇ ‘ಗಾಡ್ ಪ್ರಾಮಿಸ್’.
ಒಂದು ನೆಲದ ಕಥೆ ಹೇಳಬೇಕೆಂದರೆ, ಆ ನೆಲವನ್ನು ಅರಿತಿರಬೇಕು. ಅಲ್ಲಿನ ಜನರ ಬದುಕು, ಸಂಬಂಧಗಳು, ಭಾವನೆಗಳು ಮತ್ತು ಮಣ್ಣಿನೊಂದಿಗೆ ಅವರಿಗಿರುವ ನಂಟನ್ನು ಅರ್ಥಮಾಡಿಕೊಂಡಿರಬೇಕು. ಅಂತಹ ಕಥೆಯೊಂದನ್ನು ಬೆಳ್ಳಿತೆರೆಗೆ ತರುವ ಪ್ರಯತ್ನಕ್ಕೆ ಕರಾವಳಿಯ ಪ್ರತಿಭೆ ಸೂಚನ್ ಶೆಟ್ಟಿ ಮುಂದಾಗಿದ್ದಾರೆ.
ಕರಾವಳಿಯ ಬದುಕಿನ ಸೊಗಡನ್ನು ಹೊತ್ತಿರುವ ‘ಗಾಡ್ ಪ್ರಾಮಿಸ್’ ಇದೀಗ ಸಿನಿಪ್ರೇಕ್ಷಕರ ಗಮನ ಸೆಳೆಯಲು ಸಜ್ಜಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಸೂಚನ್ ಶೆಟ್ಟಿ ನಾಯಕನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ನವೆಂಬರ್‌ನಲ್ಲಿ ರಾಜ್ಯಾದ್ಯಂತ ಸಿನಿಮಾ ತೆರೆಕಾಣಲಿದೆ.
‘ಕಾಂತಾರ’ ಸಿನಿಮಾ ಕರಾವಳಿಯ ಮಣ್ಣಿನ ಕಥೆಯನ್ನು ಭಾರತೀಯ ಚಿತ್ರರಂಗದ ದೊಡ್ಡ ವೇದಿಕೆಗೆ ಕೊಂಡೊಯ್ದ ಬಳಿಕ, ಇಲ್ಲಿನ ಸಂಸ್ಕೃತಿ ಮತ್ತು ಬದುಕಿನ ಕಥೆಗಳಿಗೆ ಹೊಸ ಆಯಾಮ ದೊರೆತಿದೆ. ಆದರೆ ‘ಗಾಡ್ ಪ್ರಾಮಿಸ್’ ತನ್ನದೇ ಆದ ಕಥನಶೈಲಿಯಲ್ಲಿ ಕರಾವಳಿಯನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದೆ.
ಇದು ಕೇವಲ ಕರಾವಳಿಯನ್ನು ಹಿನ್ನೆಲೆಯಾಗಿ ಬಳಸಿಕೊಂಡ ಸಿನಿಮಾ ಅಲ್ಲ. ಇಲ್ಲಿನ ಜನಜೀವನ, ಸಂಬಂಧಗಳು, ಭಾವನೆಗಳು ಮತ್ತು ನೆಲದೊಂದಿಗೆ ಬೆಸೆದುಕೊಂಡಿರುವ ಬದುಕನ್ನು ಕಥೆಯ ಪ್ರಮುಖ ಭಾಗವನ್ನಾಗಿಸಿಕೊಂಡಿರುವ ಚಿತ್ರ ಎನ್ನುವುದು ಚಿತ್ರತಂಡದ ಮಾತು.
ಸೂಚನ್ ಶೆಟ್ಟಿ ಅವರಿಗೆ ಪ್ರೇಕ್ಷಕರ ಪರಿಚಯ ಹೊಸದಲ್ಲ. ‘ಕಾಂತಾರ’ದಲ್ಲಿ ಫಾರೆಸ್ಟರ್ ರವಿ ಪಾತ್ರದ ಮೂಲಕ ಗಮನ ಸೆಳೆದಿದ್ದ ಅವರು, ರವಿ ಬಸ್ರೂರು ನಿರ್ದೇಶನದ ‘ಕಡಲ್’ ಚಿತ್ರದಲ್ಲೂ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ನಟನೆಯ ಜತೆಗೆ ಕನ್ನಡದ ಹಲವು ಚಿತ್ರಗಳ ಪ್ರಮೋಶನಲ್ ಕಾರ್ಯಗಳಲ್ಲಿ ಸಕ್ರಿಯವಾಗಿದ್ದ ಸೂಚನ್ ಶೆಟ್ಟಿ, ಇದೀಗ ತಮ್ಮದೇ ಸಿನಿಮಾದ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ನಟನೆಯ ಅನುಭವವನ್ನು ನಿರ್ದೇಶನದ ದೃಷ್ಟಿಕೋನದೊಂದಿಗೆ ಬೆರೆಸಿ ‘ಗಾಡ್ ಪ್ರಾಮಿಸ್’ ಕಟ್ಟಿಕೊಡುವ ಪ್ರಯತ್ನ ಅವರದ್ದು. ‘ಗಾಡ್ ಪ್ರಾಮಿಸ್’ನಲ್ಲಿ ಕರಾವಳಿಯ ಬದುಕು ಯಾವ ರೂಪದಲ್ಲಿ ತೆರೆದುಕೊಳ್ಳಲಿದೆ ಎಂಬುದು ಚಿತ್ರದ ಪ್ರಮುಖ ಕುತೂಹಲ. ಮಣ್ಣಿನ ಸೊಗಡು, ಇಲ್ಲಿನ ಜನರ ಭಾವನಾತ್ಮಕ ಜಗತ್ತು ಮತ್ತು ಸಂಬಂಧಗಳ ನಡುವಿನ ಸಂಘರ್ಷವನ್ನು ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಇಡುವ ಪ್ರಯತ್ನ ಚಿತ್ರತಂಡ ಮಾಡಿದೆ.
ಸಾಮಾನ್ಯ ಕಥೆಯೊಂದನ್ನು ಹೇಳುವುದಕ್ಕಿಂತ, ಪ್ರೇಕ್ಷಕರಿಗೆ ತಮ್ಮದೇ ನೆಲದ ಅನುಭವವನ್ನು ನೀಡಬೇಕು ಎಂಬ ಉದ್ದೇಶದಿಂದ ಚಿತ್ರವನ್ನು ರೂಪಿಸಲಾಗಿದೆ. ಇದೇ ಕಾರಣಕ್ಕೆ ಚಿತ್ರದ ಮೇಕಿಂಗ್ ವಿಡಿಯೊ ಬಿಡುಗಡೆಯಾದ ಬಳಿಕ ಸಿನಿಮಾದ ಕುರಿತ ನಿರೀಕ್ಷೆಯೂ ಹೆಚ್ಚಾಗಿದೆ.
ಚಿತ್ರದ ಮತ್ತೊಂದು ವಿಶೇಷವೆಂದರೆ ನಾಯಕಿಯಾಗಿ ಜೂಹಿ ಜಯಕುಮಾರ್ ಕಾಣಿಸಿಕೊಳ್ಳುತ್ತಿರುವುದು. ‘ಪವಿ ಕೇರ್‌ಟೇಕರ್’ ಹಾಗೂ ‘ತಲೈವನ್ ತಲೈವಿ’ ಚಿತ್ರಗಳ ಮೂಲಕ ಗಮನ ಸೆಳೆದಿರುವ ಜೂಹಿ, ‘ಗಾಡ್ ಪ್ರಾಮಿಸ್’ ಮೂಲಕ ಕನ್ನಡಕ್ಕೆ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ.
ಸೂಚನ್ ಶೆಟ್ಟಿ ಮತ್ತು ಜೂಹಿ ಜಯಕುಮಾರ್ ಜೋಡಿಯೊಂದಿಗೆ ಕರಾವಳಿಯ ಜನಪ್ರಿಯ ಕಲಾವಿದರ ದೊಡ್ಡ ಬಳಗವೇ ಚಿತ್ರದಲ್ಲಿದೆ. ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ರಘು ಪಾಂಡೇಶ್ವರ, ನವೀನ್ ಡಿ. ಪಡೀಲ್, ರೂಪಾ ವರ್ಕಾಡಿ, ಸಿದ್ಧಿ ಪ್ರಶಾಂತ್, ಪ್ರಸಿದ್ಧ ನಾಗ್, ಶೋಭಾ ಶೆಟ್ಟಿ, ಪ್ರತಿಮಾ ನಾಯಕ್, ಕರಣ್ ಕುಂದರ್, ಅಕ್ಷತಾ ರೈ, ರಾಧಾಕೃಷ್ಣ ಕುಂಬ್ಳೆ, ಪ್ರಭಾಕರ್ ಕುಂದರ್, ರಾಮ್ ಕುಮಾರ್ ಉಪ್ಪುಂದ, ಜಯಶೀಲಾ ಮರೋಳಿ ಸೇರಿದಂತೆ ಹಲವು ಕಲಾವಿದರು ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಪಾಂಚಜನ್ಯ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್‌ನಡಿ ಮಹೇಂದ್ರ ಶೆಟ್ಟಿ ನಿರ್ಮಿಸುತ್ತಿರುವ ಚಿತ್ರಕ್ಕೆ ಅನುಭವಿ ತಾಂತ್ರಿಕ ತಂಡ ಕೈಜೋಡಿಸಿದೆ. ಭರತ್ ಮಧುಸೂದನ್ ಸಂಗೀತ, ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಮೇಕಿಂಗ್ ವಿಡಿಯೊದಲ್ಲೇ ಚಿತ್ರದ ದೃಶ್ಯ ವಿನ್ಯಾಸ ಮತ್ತು ತಾಂತ್ರಿಕ ಗುಣಮಟ್ಟದ ಕೆಲವು ಝಲಕ್‌ಗಳು ಕಾಣಿಸಿಕೊಂಡಿವೆ.
ಒಂದು ಕಡೆ ‘ಕಾಂತಾರ’ದ ಬಳಿಕ ಕರಾವಳಿಯ ಕಥೆಗಳತ್ತ ಹೆಚ್ಚಿದ ನಿರೀಕ್ಷೆ; ಮತ್ತೊಂದೆಡೆ ನಾಯಕನಾಗಿ ಮತ್ತು ನಿರ್ದೇಶಕರಾಗಿ ಒಂದೇ ಸಮಯದಲ್ಲಿ ಹೊಸ ಜವಾಬ್ದಾರಿ ಹೊತ್ತಿರುವ ಸೂಚನ್ ಶೆಟ್ಟಿ. ಹೀಗಾಗಿ ‘ಗಾಡ್ ಪ್ರಾಮಿಸ್’ ಮೇಲೆ ಸಹಜವಾಗಿಯೇ ಕುತೂಹಲ ಮೂಡಿದೆ. ಕರಾವಳಿಯ ಮಣ್ಣಿನ ಕಥೆಯನ್ನು ಸೂಚನ್ ಶೆಟ್ಟಿ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೆ? ನಾಯಕನಾಗಿ ಅವರ ಅಭಿನಯ ಹೇಗಿರಲಿದೆ? ನಿರ್ದೇಶಕರಾಗಿ ಅವರ ಮೊದಲ ಪ್ರಯತ್ನ ಎಷ್ಟರ ಮಟ್ಟಿಗೆ ವಿಭಿನ್ನವಾಗಿರಲಿದೆ?—ಈ ಎಲ್ಲ ಪ್ರಶ್ನೆಗಳಿಗೆ ನವೆಂಬರ್‌ನಲ್ಲಿ ಚಿತ್ರಮಂದಿರದಲ್ಲೇ ಉತ್ತರ ಸಿಗಲಿದೆ.
.jpeg)
.jpeg)