ದೀನದಯಾಳ್ ಉಪಾಧ್ಯಾಯರ ತ್ಯಾಗ, ತತ್ವಾದರ್ಶಗಳು ಕಾರ್ಯಕರ್ತರಿಗೆ ಸದಾ ಪ್ರೇರಣೆ: ಕುತ್ಯಾರು ನವೀನ್ ಶೆಟ್ಟಿ
ದೇಶಕ್ಕಾಗಿ ಹಾಗೂ ಪಕ್ಷದ ಬೆಳವಣಿಗೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ತ್ಯಾಗ, ಬಲಿದಾನ ಹಾಗೂ ತತ್ವಾದರ್ಶಗಳು ಪಕ್ಷದ ಕಾರ್ಯಕರ್ತರಿಗೆ ಸದಾ ಪ್ರೇರಣಾದಾಯಕವಾಗಿವೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.
ಉಡುಪಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಭಾರತೀಯ ಜನಸಂಘದ ಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಬಿತ್ತಿದ ಸದುದ್ದೇಶದ ಬೀಜ ಇಂದು ಫಲ ನೀಡಿದೆ. ಅವರ ಕನಸುಗಳು ನನಸಾಗುತ್ತಿವೆ. ಸಂವಿಧಾನದ 370ನೇ ವಿಧಿ ರದ್ದತಿಯಿಂದ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದು, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯ ಪರಿಕಲ್ಪನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳಲ್ಲಿ ಪ್ರತಿಫಲಿಸುತ್ತಿದೆ ಎಂದರು.
ಪಕ್ಷದ ಕಾರ್ಯಕರ್ತರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದೇ ಪಕ್ಷ ಕಟ್ಟಲು ಶ್ರಮಿಸಿದ ಹಿರಿಯರಿಗೆ ಸಲ್ಲಿಸುವ ಗೌರವವಾಗಿದೆ. ಸೆ.17ರಿಂದ ಜಿಲ್ಲಾದ್ಯಂತ ಆರಂಭವಾಗಿರುವ ‘ಸೇವಾ ಸಂಕಲ್ಪ ಅಭಿಯಾನ’ ಅ.17ರವರೆಗೆ ನಡೆಯಲಿದೆ. ಪಕ್ಷದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಭಕ್ತಿ, ಶ್ರದ್ಧೆ ಹಾಗೂ ಬದ್ಧತೆಯಿಂದ ಸಕ್ರಿಯವಾಗಿ ತೊಡಗಿಸಿಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಸಂಘಟಿತರಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು.
ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಅವರು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ತತ್ವಾದರ್ಶಗಳು, ತ್ಯಾಗ ಮತ್ತು ಬಲಿದಾನದ ಕುರಿತು ವಿಸ್ತೃತ ಉಪನ್ಯಾಸ ನೀಡಿದರು.
ಬಿಜೆಪಿ ಮಂಗಳೂರು ವಿಭಾಗದ ಎಸ್‌ಐಆರ್ ಸಂಚಾಲಕ ಕೆ. ಉದಯ ಕುಮಾರ್ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಟ್ಟಾರ್ ರತ್ನಾಕರ ಹೆಗ್ಡೆ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು ಸೇರಿದಂತೆ ಪಕ್ಷದ ಪ್ರಮುಖರು, ಜಿಲ್ಲಾ ಹಾಗೂ ವಿವಿಧ ಮೋರ್ಚಾ, ಪ್ರಕೋಷ್ಠ, ಮಂಡಲಗಳ ಪದಾಧಿಕಾರಿಗಳು, ಕಾರ್ಯಕಾರಿಣಿ ಮತ್ತು ಸಮಿತಿ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಎಂ. ಅಂಚನ್ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾಂತ್ ನಾಯಕ್ ವಂದಿಸಿದರು.
.jpeg)
.jpeg)