-->
 ಮೊಗವೀರ ಸಮಾಜದ ಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ

ಮೊಗವೀರ ಸಮಾಜದ ಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ


ಮೊಗವೀರ ಸಮಾಜದ ಗುರು ಪರಂಪರೆಯ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯನ್ನು ಶುಕ್ರವಾರ ಉಚ್ಚಿಲ ಮೊಗವೀರ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಗಣ್ಯರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಮೊಗವೀರ ಸಮಾಜ ಶ್ರಮಜೀವಿ ಸಮುದಾಯವಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಹೆಚ್ಚಿನ ಗಮನಹರಿಸಬೇಕು ಎಂದರು. ಕರಾವಳಿಯ ಮಣ್ಣಿಗೆ ತನ್ನದೇ ಆದ ಶಕ್ತಿ ಮತ್ತು ವೈಶಿಷ್ಟ್ಯವಿದ್ದು, ಮೊಗವೀರ ಕುಲಗುರುಗಳ ಆದರ್ಶ ಹಾಗೂ ಸಂದೇಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.

ಉಚ್ಚಿಲ ದಸರಾಕ್ಕೆ ಸರ್ಕಾರದಿಂದ ಪ್ರತಿವರ್ಷ ರೂ.50 ಲಕ್ಷ ಅನುದಾನ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅನುದಾನದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಕರ್ನಾಟಕ ಸರ್ಕಾರ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಬಾಕಿ ಇರುವ ಸರ್ಕಾರಿ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇಲಾಖೆಯಿಂದ ಜಿಲ್ಲೆಯ 92 ಸಂಸ್ಥೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.


ಕರಾವಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಹಲವು ವರ್ಷಗಳ ಬೇಡಿಕೆಯಾಗಿದ್ದ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಮಾನ್ಯತೆ ನೀಡಿರುವುದು ಐತಿಹಾಸಿಕ ಬೆಳವಣಿಗೆ. ತುಳು ಭಾಷೆಗೆ ದೊರೆತಿರುವ ಈ ಮಾನ್ಯತೆ ಹೆಮ್ಮೆಯ ಸಂಗತಿಯಾಗಿದ್ದು, ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಾಡೋಜ ಡಾ. ಜಿ. ಶಂಕರ್, ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮೊಗವೀರ ಸಮಾಜದ ಗುರು ಪರಂಪರೆಯ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯನ್ನು ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಸ್ಥಾಪಿಸುವ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚನೆ ದೊರೆತ ಹಿನ್ನೆಲೆಯಲ್ಲಿ ಸಮಾಜ ಬಾಂಧವರ ಸಂಕಲ್ಪದಂತೆ ಪುತ್ಥಳಿ ನಿರ್ಮಿಸಲಾಗಿದೆ ಎಂದರು.

ಸುಮಾರು ರೂ.3 ಕೋಟಿ ವೆಚ್ಚದಲ್ಲಿ, 31 ಅಡಿ ಎತ್ತರ ಹಾಗೂ 14 ಸಾವಿರ ಕೆ.ಜಿ. ತೂಕದ ಕಂಚು ಬಳಸಿ ಭವ್ಯ ಪುತ್ಥಳಿಯನ್ನು ನಿರ್ಮಿಸಲಾಗಿದೆ. ಸುಮಾರು ರೂ.6 ಕೋಟಿ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಲಾಗಿದ್ದು, ಪ್ರತಿವರ್ಷ ಉಚ್ಚಿಲ ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕ್ಷೇತ್ರಕ್ಕೆ ಸರ್ಕಾರದಿಂದ ಬರಬೇಕಿರುವ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವುದರ ಜೊತೆಗೆ ಉಚ್ಚಿಲ ದಸರಾಕ್ಕೆ ಪ್ರತಿವರ್ಷ ರೂ.2 ಕೋಟಿ ಅನುದಾನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಸಮುದಾಯದ ಗುರಿಕಾರ ಬಂಧುಗಳಿಗೆ ಧನಸಹಾಯ ವಿತರಿಸಲಾಯಿತು. ಉಚ್ಚಿಲ ದಸರಾ ಅಂಗವಾಗಿ ಆಯೋಜಿಸಲಾದ ರಾಜ್ಯಮಟ್ಟದ ದೇಹದಾಡ್ಯ ಸ್ಪರ್ಧೆಯ ಪೋಸ್ಟರ್‌ನ್ನು ಅನಾವರಣಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಸಮುದಾಯದ ಮುಖಂಡರಾದ ಆನಂದ್ ಸಿ. ಕುಂದರ್, ಪ್ರಸಾದ್ ರಾಜ್ ಕಾಂಚನ್, ಅಜಿತ್ ಸುವರ್ಣ, ಸಂತೋಷ್ ಪುತ್ರನ್, ಉದಯ್ ಕುಮಾರ್ ಹಟ್ಟಿಯಂಗಡಿ, ವೇದಪ್ರಕಾಶ್ ಶ್ರಿಯಾನ್, ಕವಿತಾ ಶರತ್, ನಾಗರಾಜ್ ಸುವರ್ಣ, ಮನೋಜ್ ಸಾಲ್ಯಾನ್ ಉಳ್ಳಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article