ಹೆಜಮಾಡಿ ಕೋಡ್ದಬ್ಬು ದೈವಸ್ಥಾನ ಕಾಲೋನಿ ರಸ್ತೆ ಅಭಿವೃದ್ಧಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ
Friday, September 04, 2026
ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಜಮಾಡಿ ಕೋಡ್ದಬ್ಬು ದೈವಸ್ಥಾನದ ಬಳಿಯಿಂದ ಗಿರಿಜಾ ಮನೆವರೆಗೆ ಸಂಪರ್ಕ ಕಲ್ಪಿಸುವ ಕಾಲೋನಿ ರಸ್ತೆಯ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿದೆ.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಮಂಜೂರಾದ ಅನುದಾನದಲ್ಲಿ ಕೈಗೊಳ್ಳಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ರಸ್ತೆ ಅಭಿವೃದ್ಧಿಯಿಂದ ಈ ಭಾಗದ ನಿವಾಸಿಗಳಿಗೆ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಹಲವು ವರ್ಷಗಳಿಂದ ಅಗತ್ಯವಿದ್ದ ರಸ್ತೆ ಕಾಮಗಾರಿ ಇದೀಗ ಕೈಗೆತ್ತಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರೇಷ್ಮಾ ಮೆಂಡನ್, ಮಾಜಿ ಉಪಾಧ್ಯಕ್ಷ ಮೋಹನ್ ಸುವರ್ಣ, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಹೆಜಮಾಡಿ ಬಿಲ್ಲವ ಸಂಘದ ಪದಾಧಿಕಾರಿಗಳು, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಹಾಗೂ ಹೆಜಮಾಡಿ ಶಕ್ತಿ ಕೇಂದ್ರದ ಪ್ರಮುಖರು ಉಪಸ್ಥಿತರಿದ್ದರು.