ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಕುಂಪಲದ ವ್ಯಕ್ತಿ ಹೃದಯಾಘಾತದಿಂದ ಸಾವು
ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಉಳ್ಳಾಲ ತಾಲೂಕಿನ ಕುಂಪಲದ ವ್ಯಕ್ತಿಯೋರ್ವರು ಉತ್ತರಾಖಂಡದ ಯಮುನೋತ್ರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಕುಂಪಲ ವಿದ್ಯಾನಗರ ನಿವಾಸಿ ರಾಜೇಶ್ ಗಾಣಿಗ (53) ಎಂದು ಗುರುತಿಸಲಾಗಿದೆ.
ರಾಜೇಶ್ ಅವರು ಸೆ.18ರಂದು ಉಳ್ಳಾಲದ 14 ಮಂದಿ ಸಹ ಯಾತ್ರಿಕರೊಂದಿಗೆ ಮಂಗಳೂರಿನಿಂದ ರೈಲಿನಲ್ಲಿ ಚಾರ್ ಧಾಮ್ ಯಾತ್ರೆಗೆ ತೆರಳಿದ್ದರು. ಉತ್ತರ ಭಾರತದ ವಿವಿಧ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿದ ಬಳಿಕ ಸೋಮವಾರ ಉತ್ತರಾಖಂಡ ತಲುಪಿದ್ದ ತಂಡವು ಪ್ರವಾಸಿ ಕೇಂದ್ರವೊಂದರ ಕೊಠಡಿಯಲ್ಲಿ ತಂಗಿ ವಿಶ್ರಾಂತಿ ಪಡೆದಿತ್ತು.
ಮಂಗಳವಾರ ಬೆಳಗ್ಗೆ ಯಮುನೋತ್ರಿ ಕ್ಷೇತ್ರದ ಗಿರಿಶಿಖರ ಪ್ರದೇಶದಲ್ಲಿ ಸುಮಾರು ಏಳು ಕಿಲೋಮೀಟರ್ ಪಾದಯಾತ್ರೆ ನಡೆಸಿದ ರಾಜೇಶ್ ಅವರು ಬಳಿಕ ಕ್ಷೇತ್ರದ ಆವರಣದಲ್ಲಿ ಕುರ್ಚಿಯೊಂದರಲ್ಲಿ ಕುಳಿತಿದ್ದರು. ಈ ವೇಳೆ ಹಠಾತ್ತನೆ ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣವೇ ಸಹಯಾತ್ರಿಕರು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹವನ್ನು ಉತ್ತರಾಖಂಡದ ಡೆಹ್ರಾಡೂನ್‌ನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ರಾಜೇಶ್ ಅವರು ವೃತ್ತಿಯಲ್ಲಿ ವೆಲ್ಡರ್ ಆಗಿದ್ದು, ಜಪ್ಪಿನಮೊಗರುವಿನಲ್ಲಿ ಸ್ವಂತ ವರ್ಕ್‌ಶಾಪ್ ಹೊಂದಿದ್ದರು. ಮೃತರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.