-->
ಬಣ್ಣಬಣ್ಣದ ಕಂಕುಳ ಕೂದಲು: ಚೀನಾದ ಯುವತಿಯರಲ್ಲಿ ಹೊಸ ಟ್ರೆಂಡ್

ಬಣ್ಣಬಣ್ಣದ ಕಂಕುಳ ಕೂದಲು: ಚೀನಾದ ಯುವತಿಯರಲ್ಲಿ ಹೊಸ ಟ್ರೆಂಡ್


ಚೀನಾ ರಾಜಧಾನಿ ಬೀಜಿಂಗ್ ನ ಕೆಲ ಯುವತಿಯರು ಕಂಕುಳ (Arm Pit) ಕೂದಲಿಗೆ ನೀಲಿ, ಗುಲಾಬಿ, ನೇರಳೆ ಸೇರಿದಂತೆ ವಿವಿಧ ಬಣ್ಣಗಳನ್ನು ಬಳಿದುಕೊಳ್ಳುವ ಮೂಲಕ ಹೊಸ ಫ್ಯಾಷನ್ ಟ್ರೆಂಡ್‌ಗೆ ಚಾಲನೆ ನೀಡಿದ್ದಾರೆ. 
ಒಂದು ಕಾಲದಲ್ಲಿ ಮುಜುಗರ ಹಾಗೂ ಸಾಮಾಜಿಕ ಕಳಂಕದ ವಿಷಯವಾಗಿದ್ದ ಕಂಕುಳ (Arm Pit) ಕೂದಲು ಇದೀಗ ಫ್ಯಾಷನ್ ಸ್ಟೇಟ್ ಮೆಂಟ್ ಹಾಗೂ ದೇಹದ ಮೇಲಿನ ಸ್ವಾಯತ್ತತೆಯ ಪ್ರತೀಕವಾಗಿಯೂ ಕಾಣಿಸಿಕೊಳ್ಳುತ್ತಿದೆ.
ಈ ಪ್ರವೃತ್ತಿ ಹೊಸದೇನಲ್ಲ. 2011ರಲ್ಲಿ ಖ್ಯಾತ ಗಾಯಕಿ ಲೇಡಿ ಗಾಗಾ ಹಸಿರು ಬಣ್ಣದ ಕಂಕುಳ ಕೂದಲಿನೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಬಳಿಕ ವಿವಿಧ ಬಣ್ಣಗಳಲ್ಲಿ ಕಂಕುಳ ಕೂದಲನ್ನು ಡೈ ಮಾಡುವುದು ಮತ್ತು ‘ಗ್ಲಿಟರ್ ಪಿಟ್ಸ್’ ಹೆಸರಿನಲ್ಲಿ ಕಂಕುಳ ಭಾಗವನ್ನು ಗ್ಲಿಟರ್‌ನಿಂದ ಅಲಂಕರಿಸುವ ಪ್ರವೃತ್ತಿ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು.
2026ರ ಆಗಸ್ಟ್ ಬಳಿಕ ಚೀನಾದ ಸಾಮಾಜಿಕ ಜಾಲತಾಣಗಳು ಈ ಟ್ರೆಂಡ್ ಜನಪ್ರಿಯಗೊಳ್ಳಲು ಪ್ರಮುಖ ವೇದಿಕೆಯಾಗಿವೆ. ಚೀನಾದ ಪ್ರಮುಖ ಲೈಫ್‌ಸ್ಟೈಲ್ ಪ್ಲಾಟ್‌ಫಾರ್ಮ್ ‘ರೆಡ್‌ನೋಟ್’ (RedNote)ನಲ್ಲಿ ಯುವತಿಯರು ತಮ್ಮ ಬಣ್ಣಬಣ್ಣದ ಕಂಕುಳ ಕೂದಲಿನ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ನೀಲಿ ಬಣ್ಣದ ಕೂದಲನ್ನು ಪ್ರದರ್ಶಿಸಿದರೆ, ಇನ್ನು ಕೆಲವರು ಕೂದಲನ್ನು ಬ್ಲೀಚ್ ಮಾಡಿ ನಂತರ ಬಣ್ಣ ಹಚ್ಚುವ ವಿಧಾನಗಳ ಕುರಿತು ಟ್ಯುಟೋರಿಯಲ್‌ಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.
ಅದೇ ವೇಳೆ, ಈ ಪ್ರಯೋಗದ ಬಗ್ಗೆ ಎಚ್ಚರಿಕೆಯ ಸಂದೇಶಗಳೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಚರ್ಮದಲ್ಲಿ ಉರಿ ಅಥವಾ ಕಿರಿಕಿರಿ ಉಂಟಾಗುವ ಸಾಧ್ಯತೆ, ಬಣ್ಣ ಬೇಗನೆ ಮಾಸುವಂತಹ ಸಮಸ್ಯೆಗಳ ಬಗ್ಗೆ ಕೆಲವರು ಎಚ್ಚರಿಸಿದ್ದಾರೆ.
ಈ ಹೊಸ ಟ್ರೆಂಡ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕೆಲ ಯುವತಿಯರಿಗೆ ಇದು ಕೇವಲ ಸೌಂದರ್ಯ ಅಥವಾ ಫ್ಯಾಷನ್‌ಗೆ ಸಂಬಂಧಿಸಿದ ವಿಷಯವಲ್ಲ. ಮಹಿಳೆಯರ ದೇಹದ ಕೂದಲಿನ ಬಗ್ಗೆ ಇರುವ ಸಾಮಾಜಿಕ ಪೂರ್ವಗ್ರಹಗಳನ್ನು ಪ್ರಶ್ನಿಸುವುದು ಮತ್ತು ಮಹಿಳೆಯರು ತಮ್ಮ ದೇಹದ ಬಗ್ಗೆ ಸ್ವತಂತ್ರವಾಗಿ ನಿರ್ಧರಿಸುವ ಹಕ್ಕನ್ನು ಪ್ರತಿಪಾದಿಸುವುದೂ ಇದರ ಉದ್ದೇಶವಾಗಿದೆ.
ಚೀನಾದಲ್ಲಿ ಮಹಿಳೆಯರು ಕಂಕುಳ ಕೂದಲನ್ನು ತೆಗೆದುಹಾಕಬೇಕು ಎಂಬ ವ್ಯಾಪಕ ಸೌಂದರ್ಯ ನಿರೀಕ್ಷೆಗಳು ಹೆಚ್ಚುತ್ತಿರುವುದು ಇತ್ತೀಚಿನ ಬೆಳವಣಿಗೆ ಎಂದು ಕೆಲವು ಅಧ್ಯಯನಗಳು ಹಾಗೂ ತಜ್ಞರ ಅಭಿಪ್ರಾಯಗಳು ಸೂಚಿಸುತ್ತವೆ. ಬದಲಾಗುತ್ತಿರುವ ಸೌಂದರ್ಯ ಮಾನದಂಡಗಳು ಮತ್ತು ಜಾಗತಿಕ ಸಾಂಸ್ಕೃತಿಕ ಪ್ರಭಾವಗಳು ಈ ನಿರೀಕ್ಷೆಗಳಿಗೆ ಕಾರಣ ಎಂದು ಹೇಳಲಾಗಿದೆ.
ಹೀಗಾಗಿ, ಬಣ್ಣಬಣ್ಣದ ಕಂಕುಳ ಕೂದಲಿನ ಈ ಹೊಸ ಟ್ರೆಂಡ್ ಕೇವಲ ವಿಭಿನ್ನ ಫ್ಯಾಷನ್ ಪ್ರಯೋಗವಲ್ಲದೆ, ದೇಹದ ಸ್ವಾತಂತ್ರ್ಯ, ಸಾಮಾಜಿಕ ಮಾನದಂಡಗಳು ಹಾಗೂ ಮಹಿಳೆಯರ ಸ್ವಯಂ ಅಭಿವ್ಯಕ್ತಿಯ ಕುರಿತ ಚರ್ಚೆಗೂ ವೇದಿಕೆಯಾಗಿದೆ.

Ads on article

Advertise in articles 1

advertising articles 2

Advertise under the article