ಅಂತರರಾಜ್ಯ ಮನೆ ಕಳ್ಳತನ ಪ್ರಕರಣ: ಬೆಡಿಯಾ ಗ್ಯಾಂಗ್‌ನ ಇಬ್ಬರು ಆರೋಪಿಗಳ ಬಂಧನ
ಅಂತರರಾಜ್ಯ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸರು ಉತ್ತರ ಪ್ರದೇಶ ಮೂಲದ ಬೆಡಿಯಾ ಗ್ಯಾಂಗ್‌ಗೆ ಸೇರಿದ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 4.50 ಲಕ್ಷ ಮೌಲ್ಯದ ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಶಿ ತಾಲೂಕಿನ ಅಕ್ರೌಲಿ ಗ್ರಾಮದ ಮೊಹಮ್ಮದ್ ಜಾಫರ್ (22) ಹಾಗೂ ಕದೀರ್ (32) ಎಂದು ಗುರುತಿಸಲಾಗಿದೆ.
ಅಂಬಲಪಾಡಿಯ ಕುಂಜುಗುಡ್ಡೆ ರಸ್ತೆ ಸಹಾರಾ ಅಪಾರ್ಟ್‌ಮೆಂಟ್ ಸಮೀಪದ ಮನೆಯೊಂದರಲ್ಲಿ ಜುಲೈ 7ರಿಂದ ಜುಲೈ 9ರ ನಡುವೆ 6 ಲಕ್ಷ ನಗದು ಹಾಗೂ ಮೂರು ವಾಚ್‌ಗಳು ಕಳವಾಗಿತ್ತು. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸೆಪ್ಟೆಂಬರ್ 2ರಂದು ಖಚಿತ ಮಾಹಿತಿಯ ಮೇರೆಗೆ ಉಡುಪಿ ಇಂದ್ರಾಳಿ ರೈಲು ನಿಲ್ದಾಣದ ಬಳಿ ಮೊಹಮ್ಮದ್ ಜಾಫರ್‌ನನ್ನು ಬಂಧಿಸಿದರು. ವಿಚಾರಣೆ ವೇಳೆ ತನ್ನ ಸ್ನೇಹಿತ ಕದೀರ್‌ನೊಂದಿಗೆ ಸೇರಿ ಅಂಬಲಪಾಡಿಯ ಮನೆಯಲ್ಲಿ ಕಳ್ಳತನ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ 1.50 ಲಕ್ಷ ನಗದು ಹಾಗೂ ಸುಮಾರು 8 ಸಾವಿರ ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಯಿತು. ಬಳಿಕ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆದು ಉತ್ತರ ಪ್ರದೇಶಕ್ಕೆ ತೆರಳಿದ ಪೊಲೀಸರು ಅಲ್ಲಿಂದ 1.06 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ತನಿಖೆ ಮುಂದುವರಿಸಿದ ಪೊಲೀಸರು ಸೆಪ್ಟೆಂಬರ್ 25ರಂದು ಮೂಡಬಿದ್ರೆಯಲ್ಲಿ ಎರಡನೇ ಆರೋಪಿ ಕದೀರ್‌ನನ್ನು ಬಂಧಿಸಿದ್ದಾರೆ. ಆತನಿಂದ 1.65 ಲಕ್ಷ ನಗದು, 6 ಸಾವಿರ ಮೌಲ್ಯದ ಎರಡು ಬೆಳ್ಳಿ ನಾಣ್ಯಗಳು, 15 ಸಾವಿರ ಮೌಲ್ಯದ ವಿವಿಧ ಕಂಪನಿಗಳ ಐದು ವಾಚ್‌ಗಳು, ಕೃತ್ಯಕ್ಕೆ ಬಳಸಿದ್ದ ಎರಡು ಸ್ಕೂಡ್ರೈವರ್‌ಗಳು ಹಾಗೂ ಕಂದು ಬಣ್ಣದ ಬ್ಯಾಗ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಒಟ್ಟು 4,50,500 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್‌ನ ಸದಸ್ಯರಾಗಿದ್ದು, ಇವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಮನೆ ಕಳ್ಳತನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಮೊಹಮ್ಮದ್ ಜಾಫರ್ ವಿರುದ್ಧ ಉತ್ತರಾಖಂಡದ ನೈನಿತಾಲ್ ಪೊಲೀಸ್ ಠಾಣೆಯಲ್ಲಿ ಒಂದು ಮನೆ ಕಳ್ಳತನ ಪ್ರಕರಣ ದಾಖಲಾಗಿದ್ದು, ಕದೀರ್ ವಿರುದ್ಧ ಉತ್ತರ ಪ್ರದೇಶದ ಬನಿಯಾಟೇರ್ ಹಾಗೂ ಮುರಾದಾಬಾದ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗಳಲ್ಲಿ ಮನೆ ಕಳ್ಳತನ ಮತ್ತು ಅಕ್ರಮ ಶಸ್ತ್ರಾಸ್ತ್ರ ಸೇರಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಉಡುಪಿ ನಗರ ಠಾಣೆಯ ಪಿಎಸ್‌ಐ ರತ್ನಾಕರ್ ಕೆ., ಎಎಸ್‌ಐ ಹರೀಶ್, ಪ್ರಸನ್ನ ಸಿ., ಜೀವನ್ ಕುಮಾರ್, ಆನಂದ ಗಾಣಿಗ, ಆನಂದ, ಓಬಳೇಶ್, ಆನಂದಯ್ಯ, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಹಕರಿಸಿದರು.