ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ಮಹಿಳೆಯ ಸರ ಕಳವು: ಕೃತ್ಯ ಸಿಸಿಟಿವಿಯಲ್ಲಿ ಸೆರೆ
Monday, September 14, 2026
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರ ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡ ಕಳ್ಳಿಯರು ಮಹಿಳೆಯೊಬ್ಬರ ಮಾಂಗಲ್ಯ ಸರ ಕಳವು ಮಾಡಿರುವ ಘಟನೆ ನಡೆದಿದೆ.
ಗಣೇಶ ಚತುರ್ಥಿ ಪ್ರಯುಕ್ತ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಈ ವೇಳೆ ದೇವಳದ ಗರ್ಭಗುಡಿಯ ಪಕ್ಕದಲ್ಲಿ ತೀರ್ಥ ಸ್ವೀಕರಿಸುತ್ತಿದ್ದ ಭಕ್ತರ ನಡುವೆ ಸೇರಿಕೊಂಡ ಕಳ್ಳಿಯರು, ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಎಗರಿಸಿದ್ದಾರೆ ಎನ್ನಲಾಗಿದೆ.
ಕಳವು ಕೃತ್ಯದ ದೃಶ್ಯ ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೂವರು ಮಹಿಳೆಯರು ಕಳ್ಳತನದಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಜನಜಂಗುಳಿಯ ನಡುವೆ ಅತ್ಯಂತ ಚಾಣಾಕ್ಷತನದಿಂದ ಕೃತ್ಯ ಎಸಗಿರುವುದು ಸಿಸಿ ಕ್ಯಾಮೆರಾ ದೃಶ್ಯಗಳಿಂದ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.