ಉಡುಪಿ ನಗರಸಭೆ ವ್ಯಾಪ್ತಿಯ ದಾರಿದೀಪ ದುರಸ್ಥಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
Tuesday, September 29, 2026
ಉಡುಪಿ ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಹದಗೆಟ್ಟಿರುವ ದಾರಿದೀಪಗಳು ಮತ್ತು ಮಿನಿ ಹೈಮಾಸ್ಟ್ ಲೈಟ್‌ಗಳನ್ನು ಶೀಘ್ರ ದುರಸ್ತಿಪಡಿಸುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.
ನಗರಸಭೆ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ದಾರಿದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ರಸ್ತೆ ಡಿವೈಡರ್‌ಗಳಲ್ಲಿ ಅಳವಡಿಸಿರುವ ಮಿನಿ ಹೈಮಾಸ್ಟ್ ಲೈಟ್‌ಗಳು ಪದೇಪದೇ ಕೆಟ್ಟುಹೋಗುತ್ತಿದ್ದು, ಸಮರ್ಪಕ ನಿರ್ವಹಣೆ ನಡೆಯುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಯಿತು.
ದಾರಿದೀಪಗಳ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ನಿರೀಕ್ಷಿತ ಕ್ರಮ ಕೈಗೊಳ್ಳಲಾಗಿಲ್ಲ. ಗುತ್ತಿಗೆದಾರರಿಗೆ ದಂಡ ವಿಧಿಸಿ, ಅವರಿಂದ ಸಮರ್ಪಕವಾಗಿ ನಿರ್ವಹಣಾ ಕಾರ್ಯ ಮಾಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ್. ರಾತ್ರಿ ವೇಳೆ ದಾರಿದೀಪಗಳ ಕೊರತೆಯಿಂದ ಸಾರ್ವಜನಿಕರು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಗುತ್ತಿಗೆದಾರರಿಂದ ಸಮರ್ಪಕ ನಿರ್ವಹಣೆ ಮಾಡಿಸುವುದರೊಂದಿಗೆ ನಿರ್ಲಕ್ಷ್ಯ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೀನಾಕ್ಷಿ ಮಾಧವ ಬನ್ನಂಜೆ, ಗಣೇಶ್ ನೆರ್ಗಿ, ಸುಕೇಶ್ ಕುಂದರ್, ಸತೀಶ್ ಕುಮಾರ್ ಮಂಚಿ, ಸಂಧ್ಯಾ ತಿಲಕ್‌ರಾಜ್, ಭರತ್ ಕುಮಾರ್, ರಮೇಶ್ ಪಾಲ್ ಹಾಗೂ ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.
