-->
 ಉಡುಪಿ ಎಪಿಎಂಸಿಯಲ್ಲಿ ಭ್ರಷ್ಟಾಚಾರ: ಉರುಳು ಸೇವೆ ಮೂಲಕ ಎಪಿಎಂಸಿ ರಕ್ಷಣಾ ಸಮಿತಿ ಪ್ರತಿಭಟನೆ

ಉಡುಪಿ ಎಪಿಎಂಸಿಯಲ್ಲಿ ಭ್ರಷ್ಟಾಚಾರ: ಉರುಳು ಸೇವೆ ಮೂಲಕ ಎಪಿಎಂಸಿ ರಕ್ಷಣಾ ಸಮಿತಿ ಪ್ರತಿಭಟನೆ


ಉಡುಪಿ ಎಪಿಎಂಸಿಯಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಎಪಿಎಂಸಿ ರಕ್ಷಣಾ ಸಮಿತಿ ವತಿಯಿಂದ ಉರುಳು ಸೇವೆ ಮಾಡುವ ಮೂಲಕ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಲಾಯಿತು.

2020ರಲ್ಲಿ ಉದ್ಘಾಟನೆಗೊಂಡ ನಿತ್ಯಮಾರುಕಟ್ಟೆ ನಿವೇಶನದಲ್ಲಿದ್ದ ಸುಮಾರು 40 ಲಕ್ಷ ರೂ. ಮೌಲ್ಯದ ಇಂಟರ್‌ಲಾಕ್, ಶೆಡ್‌ಗಳು ಹಾಗೂ ಬೆಲೆಬಾಳುವ ಮರಗಳನ್ನು ಕೆಲವರು ನಾಶಪಡಿಸಿದ್ದಾರೆ. ಈ ಕೃತ್ಯದಲ್ಲಿ ಎಪಿಎಂಸಿ ಲೆಕ್ಕಿಗರು ಶಾಮೀಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಇದೇ ವೇಳೆ ನಿತ್ಯಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ದಾಸ್ತಾನು ಮಳಿಗೆಗಳ ಕಾಮಗಾರಿಯಲ್ಲಿಯೂ ನಿಯಮ ಉಲ್ಲಂಘನೆ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ನಾಲ್ವರು ವರ್ತಕರು ಕಾಮಗಾರಿ ನಿಯಮಗಳನ್ನು ಉಲ್ಲಂಘಿಸಿ ಮಳಿಗೆಗಳನ್ನು ನಿರ್ಮಿಸುತ್ತಿದ್ದು, ಈ ಕುರಿತು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಅಕ್ರಮ ಕಾಮಗಾರಿಯನ್ನು ರದ್ದುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿಯಲ್ಲಿ ನಡೆಯುತ್ತಿರುವ ಆರೋಪಿತ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಪಿಎಂಸಿ ರಕ್ಷಣಾ ಸಮಿತಿ ಅಧ್ಯಕ್ಷ ವಿಜಯ ಕೊಡವೂರು, ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಸುಭಾಷಿತ್ ಕುಮಾರ್, ಉಡುಪಿ ಬಿಜೆಪಿ ಜಿಲ್ಲಾ ವಕ್ತಾರ ಮಧುಕರ ಮುದ್ರಾಡಿ, ಜನಧ್ವನಿ ಉಡುಪಿಯ ನಟೇಶ್, ಎಪಿಎಂಸಿ ಸದಸ್ಯ ರಮಾಕಾಂತ್ ಕಾಮತ್, ವರ್ತಕರಾದ ಪ್ರಭುಗೌಡ, ಫಯಾಜ್, ಜಗಳೂರಯ್ಯ, ರಮಾನಾಥ ಪೈ, ರಾಧಾಕೃಷ್ಣ ಮಲ್ಪೆ ಸೇರಿದಂತೆ ಹಲವರು ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article