ಖಿನ್ನತೆಗೆ ಒಳಗಾದ ವೃದ್ಧೆಯ ರಕ್ಷಣೆ; ಜಿಲ್ಲಾಸ್ಪತ್ರೆಗೆ ದಾಖಲಿಸಿದ ವಿಶು ಶೆಟ್ಟಿ ಅಂಬಲಪಾಡಿ
Tuesday, September 08, 2026
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಿನ್ನತೆಗೆ ಒಳಗಾಗಿ ಸಂಕಷ್ಟದಲ್ಲಿದ್ದ ವೃದ್ಧ ಮಹಿಳೆಯೊಬ್ಬರನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಕ್ಷಿಸಲ್ಪಟ್ಟ ಮಹಿಳೆಯನ್ನು ಬಂಟ್ವಾಳ ತಾಲೂಕಿನ ಸಜಿಪ ನಿವಾಸಿ ಲಕ್ಷ್ಮಿ (67) ಎಂದು ಗುರುತಿಸಲಾಗಿದೆ. ಸಂಜೆ ವೇಳೆಯಲ್ಲಿ ಸಂಕಷ್ಟದ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಗಮನಿಸಿದ ವಿಶು ಶೆಟ್ಟಿ ಅಂಬಲಪಾಡಿ ಅವರು ಮಾನವೀಯತೆಯಿಂದ ಸ್ಪಂದಿಸಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಉದ್ಯಾವರ ರಾಮದಾಸ್ ಪಾಲನ್ ಸಹಕರಿಸಿದ್ದಾರೆ.
ಮಹಿಳೆಯ ಪತಿ ಮೃತಪಟ್ಟಿದ್ದು, ಮಕ್ಕಳಿಲ್ಲ ಎಂದು ತಿಳಿದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಬಂದಿರುವುದಾಗಿ ಮಹಿಳೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಮಹಿಳೆಯ ಆಧಾರ್ ಕಾರ್ಡ್ ಕೂಡ ಲಭ್ಯವಾಗಿದೆ.
ಈ ಕುರಿತು ಮುಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಮಹಿಳೆಯನ್ನು ಹೆಚ್ಚಿನ ಆರೈಕೆ ಹಾಗೂ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದರೆ ಜಿಲ್ಲಾ ಆಸ್ಪತ್ರೆಗೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.