ರೇಬಿಸ್ ಬಗ್ಗೆ ತಪ್ಪು ಕಲ್ಪನೆ ಬೇಡ: ಪಶುವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ
ಪ್ರಾಣಿಗಳು ಕಚ್ಚುವುದರಿಂದ ರೇಬಿಸ್ ರೋಗ ಹರಡುತ್ತದೆ. ದನದ ಹಲ್ಲು ತಾಗುವುದರಿಂದಲೂ ರೇಬಿಸ್ ಹರಡುವ ಸಾಧ್ಯತೆ ಇದ್ದು, ದನಗಳೂ ರೇಬಿಸ್‌ಗೆ ತುತ್ತಾಗಬಹುದು. ಆದರೆ ದನದ ಹಾಲನ್ನು ಕುದಿಸಿ ಸೇವಿಸುವುದರಿಂದ ರೇಬಿಸ್ ಹರಡುವುದಿಲ್ಲ ಎಂದು ಮಣಿಪಾಲದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ ಹೇಳಿದರು.
ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು, ಹುಚ್ಚು ಹಿಡಿದಿರುವ ನಾಯಿ ನೀರಿಗೆ ಹೆದರುತ್ತದೆ ಎಂಬುದು ತಪ್ಪು ಕಲ್ಪನೆ. ಹೈಡ್ರೋಫೋಬಿಯಾ (ಜಲದ್ವೇಷ) ಮನುಷ್ಯರಲ್ಲಿ ಕಾಣಿಸಿಕೊಳ್ಳುವ ರೇಬಿಸ್‌ನ ಪ್ರಮುಖ ಲಕ್ಷಣವಾಗಿದೆ. ಬೆಕ್ಕು ಅಥವಾ ನಾಯಿ ಕಚ್ಚಿದರೆ, ಪರಚಿದರೆ ಗಾಯವನ್ನು ತಕ್ಷಣ ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು. ಬಳಿಕ ವೈದ್ಯರ ಸಲಹೆಯಂತೆ ಅಗತ್ಯ ಲಸಿಕೆ ಪಡೆಯಬೇಕು ಎಂದರು.
ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಹರಡುವ ಸಾಂಕ್ರಾಮಿಕ ರೋಗಗಳನ್ನು ಜೊನೋಟಿಕ್ ರೋಗಗಳು ಎಂದು ಕರೆಯಲಾಗುತ್ತದೆ. ಕುದುರೆಗಳಲ್ಲಿ ಗ್ಲಾಂಡರ್ಸ್, ದನಗಳಲ್ಲಿ ಬ್ರುಸೆಲ್ಲೋಸಿಸ್ ಹಾಗೂ ಮೇಕೆಗಳಿಂದ ಮನುಷ್ಯರಿಗೆ ಅಂಥ್ರಾಕ್ಸ್ ಹರಡುವ ಸಾಧ್ಯತೆ ಇದೆ. ಬೆಕ್ಕುಗಳಲ್ಲಿ ಟೋಕ್ಸೋಪ್ಲಾಸ್ಮೋಸಿಸ್ ಕಾಣಿಸಿಕೊಳ್ಳುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರೇಬಿಸ್ ಹಾಗೂ ಜೊನೋಟಿಕ್ ರೋಗಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಪಶುವೈದ್ಯೆ ಡಾ. ಪುಷ್ಪ ಜಿ. ಮಾಲಗಿತ್ತಿಮಠ್ ಮಾತನಾಡಿ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪಶುವೈದ್ಯಕೀಯ ಕೋರ್ಸ್‌ಗಳಿಗೆ ಸೇರುವಂತೆ ಪ್ರೋತ್ಸಾಹಿಸಿದರು.
ಕಾಲೇಜಿನ ಪ್ರಾಚಾರ್ಯ ಸಿ. ಸುರೇಶ್ ತುಂಗ ಅಧ್ಯಕ್ಷತೆ ವಹಿಸಿದ್ದರು. ಇಕೋ ಕ್ಲಬ್ ಸಂಯೋಜಕಿ ಪದ್ಮಾ ಎ. ಆಚಾರ್ಯ, ಉಪನ್ಯಾಸಕರಾದ ವೀಣಾ ಜಿ. ಪ್ರಭು, ಲಕ್ಷ್ಮಣನ್ ಹಾಗೂ ಪಾವನ ಕಶ್ಯಪ್ ಉಪಸ್ಥಿತರಿದ್ದರು. ಇಕೋ ಕ್ಲಬ್ ಕಾರ್ಯದರ್ಶಿ ಸಾನ್ವಿ ವಿ. ಸ್ವಾಗತಿಸಿದರು. ಅಮಿರತ್ ನಿರೂಪಿಸಿದರು. ಬಿಂದಿಯಾ ವಂದಿಸಿದರು.